ADVERTISEMENT

ಹಸಿರು ಹೈಡ್ರೋಜನ್‌ ಉತ್ಪಾದನೆ: ಐಐಎಸ್‌ಸಿಯ ಹೊಸ ವಿಧಾನ  

​ಪ್ರಜಾವಾಣಿ ವಾರ್ತೆ
Published 12 ಜುಲೈ 2022, 15:54 IST
Last Updated 12 ಜುಲೈ 2022, 15:54 IST

ನವದೆಹಲಿ: ಜೈವಿಕ ತ್ಯಾಜ್ಯಗಳಿಂದ ಹಸಿರು ಹೈಡ್ರೋಜನ್‌ (ಶುದ್ಧ ಜಲಜನಕ ಇಂಧನ) ಉತ್ಪಾದಿಸುವ ಪರಿಸರ ಸ್ನೇಹಿ ವಿಧಾನವನ್ನುಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಕೇಂದ್ರದ ನವೀನ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಬೆಂಬಲದಲ್ಲಿಈ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ.

ಜೈವಿಕ ತ್ಯಾಜ್ಯವು ನವೀಕರಿಸಬಹುದಾದ ಹೇರಳ ಇಂಧನ ಮೂಲವೆನಿಸಿದೆ.ಮುಂಬರುವ ವರ್ಷಗಳಲ್ಲಿ ವಿವಿಧ ವಲಯಗಳಲ್ಲಿ, ವಿವಿಧ ವಿಧಾನದಿಂದ ಕನಿಷ್ಠ 50 ಲಕ್ಷ ಟನ್‌ ಹೈಡ್ರೋಜನ್‌ ಅನ್ನು ಭಾರತ ಬಳಸಲಿದೆ. ಹೈಡ್ರೋಜನ್‌ ಮಾರುಕಟ್ಟೆಯು ಗಣನೀಯವಾಗಿ ಸುಸ್ಥಿರ ಬೆಳವಣಿಗೆ ಸಾಧಿಸುವ ನಿರೀಕ್ಷೆ ಇದೆ ಎಂದು ಐಐಎಸ್‌ಸಿ ಸಂಶೋಧಕರು ಹೇಳಿದ್ದಾರೆ.

ADVERTISEMENT

ಐಐಎಸ್‌ಸಿಯ ಸುಸ್ಥಿರ ತಂತ್ರಜ್ಞಾನಗಳ ಕೇಂದ್ರದ ಪ್ರೊಫೆಸರ್‌ ಎಸ್‌. ದಾಸಪ್ಪ ಅವರ ನೇತೃತ್ವದ ಸಂಶೋಧಕರ ತಂಡವು, ಜೈವಿಕ ತ್ಯಾಜ್ಯದಿಂದ ಎರಡು ಹಂತಗಳಲ್ಲಿ ಹಸಿರು ಹೈಡ್ರೋಜನ್‌ ಉತ್ಪಾದಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.

ಮೊದಲ ಹಂತದಲ್ಲಿ ಜೈವಿಕ ತ್ಯಾಜ್ಯವನ್ನು ಸಿಂಥೆಸಿಸ್‌ ನೈಸರ್ಗಿಕ ಅನಿಲವಾಗಿ (ಸಿಂಥೆಸಿಸ್‌ ನ್ಯಾಚುರಲ್‌ ಗ್ಯಾಸ್‌) ಮಾರ್ಪಡಿಸಲಾಗುವುದು. ಆಮ್ಲಜನಕ ಮತ್ತು ಉಗಿಯನ್ನು ನೋವೆಲ್‌ ರಿಯಾಕ್ಟರ್‌ ಆಗಿ ಬಳಸಿ ಉತ್ಪಾದಿಸಿದ ಹೇರಳ ಜಲಜನಕ ಇಂಧನ ಮಿಶ್ರಣದ ಅನಿಲವೇ ಸಿನ್‌ಗ್ಯಾಸ್‌.

ಎರಡನೇ ಹಂತದಲ್ಲಿ, ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಕಡಿಮೆ ಒತ್ತಡದ ಅನಿಲ ಪ್ರತ್ಯೇಕಿಸುವ ಘಟಕ ಬಳಸಿ, ಸಿಂಥೆಸಿಸ್‌ ಗ್ಯಾಸ್‌ನಿಂದಶುದ್ಧ ಹೈಡ್ರೋಜನ್‌ ಉತ್ಪಾದಿಸಲಾಗುತ್ತದೆ. ಹಸಿರು ಹೈಡ್ರೋಜನ್‌ ಉತ್ಪಾದನೆಯ ಪ್ರಕ್ರಿಯೆಯಲ್ಲಿ ಈ ಎರಡು ತಂತ್ರಜ್ಞಾನಗಳು ಅತ್ಯಂತ ದಕ್ಷತೆಯ ವಿಧಾನಗಳೆನಿಸಿವೆ ಎಂದು ಸಂಶೋಧಕರು ಹೇಳಿದ್ದಾರೆ.

ಸದ್ಯದ ತಂತ್ರಜ್ಞಾನದಲ್ಲಿ 1 ಕೆ.ಜಿ. ಜೈವಿಕ ತ್ಯಾಜ್ಯದಿಂದ 60 ಗ್ರಾಂನಷ್ಟುಹೈಡ್ರೋಜನ್‌ ಉತ್ಪಾದಿಸಲಾಗುತ್ತಿದೆ.ಐಐಎಸ್‌ಸಿಯ ನವೀನ ತಂತ್ರಜ್ಞಾನದಿಂದ 1 ಕೆ.ಜಿ ಜೈವಿಕ ತ್ಯಾಜ್ಯದಲ್ಲಿ 100 ಗ್ರಾಂ ಹೈಡ್ರೋಜನ್‌ ಉತ್ಪಾದಿಸಬಹುದಾಗಿದೆ ಎಂದುಸಂಶೋಧಕರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.