ADVERTISEMENT

3ನೇ ಅಲೆ: ಜನವರಿಗೆ ಶುರು, ಮಾರ್ಚ್‌ನಲ್ಲಿ ಉತ್ತುಂಗ, ಏಪ್ರಿಲ್‌ಗೆ ಅಂತ್ಯ– ತಜ್ಞರು

ಐಎಎನ್ಎಸ್
Published 3 ಜನವರಿ 2022, 6:34 IST
Last Updated 3 ಜನವರಿ 2022, 6:34 IST
   

ಕಾನ್ಪುರ: ಕೋವಿಡ್‌ ಸಾಂಕ್ರಾಮಿಕ ರೋಗದ ಮೂರನೇ ಅಲೆ ಏಪ್ರಿಲ್ ವೇಳೆಗೆ ಕೊನೆಗೊಳ್ಳಲಿದೆ ಎಂದು ಐಐಟಿ ಕಾನ್ಪುರದ ಪ್ರೊಫೆಸರ್ ಮಣೀಂದ್ರ ಅಗರ್ವಾಲ್ ಅವರು ಹೇಳಿದ್ದಾರೆ.

ಆದಾಗ್ಯೂ, ಚುನಾವಣಾ ಸಮಾವೇಶಗಳಿಂದಾಗಿ ಕೊರೊನಾ ವೈರಸ್‌ ಸೋಂಕು ಮತ್ತಷ್ಟು ತೀವ್ರವಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ. ಸಮಾವೇಶಗಳಲ್ಲಿ ಕೋವಿಡ್‌ ಮಾರ್ಗಸೂಚಿಗಳು ಪಾಲನೆಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಸಮಾವೇಶಗಳ ವಿಚಾರದಲ್ಲಿ ಎಚ್ಚರಿಕೆ ಹೊಂದಿರಬೇಕು. ಇಲ್ಲವಾದಲ್ಲಿ, ಸೋಂಕು ವೇಗವಾಗಿ ಹರಡುತ್ತದೆ ಎಂದು ಅಗರ್ವಾಲ್‌ ಹೇಳಿರುವುದಾಗಿ ಸುದ್ದಿ ಸಂಸ್ಥೆ ಐಎನ್‌ಎಸ್‌ ವರದಿ ಮಾಡಿದೆ.

ADVERTISEMENT

ಅಂಕಿ-ಅಂಶಗಳ ಆಧಾರದ ಮೇಲೆ ಸಾಂಕ್ರಾಮಿಕ ರೋಗದ ಭವಿಷ್ಯತ್ತಿನ ಬಗ್ಗೆ ಮಾತನಾಡಿರುವ ಅಗರ್ವಾಲ್, 'ಜನವರಿಯಲ್ಲಿ ಭಾರತದ ಮೂರನೇ ಅಲೆ ಮೇಲೇಳಲಿದೆ. ಮಾರ್ಚ್‌ನಲ್ಲಿ ಪ್ರತಿದಿನ 1.8 ಲಕ್ಷ ಪ್ರಕರಣಗಳು ವರದಿಯಾಗಲಿವೆ' ಎಂದು ಮನ್ಸೂಚನೆ ನೀಡಿದ್ದಾರೆ.

ಈ ಅಲೆಯಲ್ಲಿ 10ರಲ್ಲಿ ಒಬ್ಬರಿಗೆ ಮಾತ್ರ ಆಸ್ಪತ್ರೆಯ ಅಗತ್ಯವಿರಲಿದೆ. ಇದು ಎಲ್ಲರೂ ಸಮಾಧಾನ ಪಡಬೇಕಾದ ಸಂಗತಿ. ಮಾರ್ಚ್ ಮಧ್ಯದಲ್ಲಿ ಎರಡು ಲಕ್ಷ ಬೆಡ್‌ಗಳು ಬೇಕಾಗುತ್ತವೆ ಎಂದು ಅವರು ಹೇಳಿದ್ದಾರೆ.

ಆಫ್ರಿಕಾ ಮತ್ತು ಭಾರತದಲ್ಲಿ ಶೇಕಡಾ 80 ರಷ್ಟು ಜನಸಂಖ್ಯೆಯು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ನೈಸರ್ಗಿಕ ಪ್ರತಿರೋಧಕ ಶಕ್ತಿಯು ಎರಡೂ ದೇಶಗಳ ಜನರಲ್ಲಿ ಶೇ 80ರಷ್ಟಿದೆ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.