ನವದೆಹಲಿ: 5ಜಿ ಗ್ರೂಪ್–1 ಸಾಧನಗಳ ಕೋರ್ ನೆಟ್‌ವರ್ಕ್‌ನ ಕಾರ್ಯಾಚರಣೆ, ಲಭ್ಯತೆ ಮತ್ತು ಚಲನಶೀಲತೆಯ ನಿರ್ವಹಣೆ ಪರೀಕ್ಷೆಗಾಗಿ ಐಐಟಿ ಮದ್ರಾಸ್‌ನ ಪ್ರವರ್ತಕ ಟೆಕ್ನಾಲಜೀಸ್‌ನ ಪ್ರಯೋಗಾಲಯವನ್ನು ಅಧಿಕೃತ ಪರೀಕ್ಷಾ ಕೇಂದ್ರವೆಂದು ಕೇಂದ್ರದ ದೂರಸಂಪರ್ಕ ಇಲಾಖೆ ಮಾನ್ಯ ಮಾಡಿದೆ.
ಅತ್ಯಾಧುನಿಕ ದೂರಸಂಪರ್ಕ ತಂತ್ರಜ್ಞಾನವಾದ 5ಜಿ ಮೊಬೈಲ್ ಹಾಗೂ ದೂರಸಂಪರ್ಕ ಸಾಧನಗಳಿಗೆ ಈ ಪ್ರಯೋಗಾಲಯದ ಮಾನ್ಯತೆಯೇ ಅಂತಿಮವಾಗಲಿದೆ. ಆ ಮೂಲಕ ದೇಶದಲ್ಲಿ ಸುಭದ್ರ ಮತ್ತು ಪ್ರಬಲ 5ಜಿ ತಂತ್ರಜ್ಞಾನ ಮೂಲಸೌಕರ್ಯವನ್ನು ಕಲ್ಪಿಸುವ ಯೋಜನೆ ಇಲಾಖೆಯದ್ದು.
ಸಾಮಾನ್ಯ ಭದ್ರತಾ ಅವಶ್ಯಕತೆಗಳ ಅಡಿಯಲ್ಲಿ 21 ಪ್ರಮುಖ ಕೋರ್-ನೆಟ್‌ವರ್ಕ್ ಕಾರ್ಯಗಳನ್ನು ಒಳಗೊಂಡಿರುವ AMF ಮತ್ತು 5G ಗ್ರೂಪ್-1 ಸಾಧನಗಳನ್ನು ಪರೀಕ್ಷಿಸಲು ರಾಷ್ಟ್ರೀಯ ಸಂವಹನ ಭದ್ರತಾ ಕೇಂದ್ರದಿಂದ (NCSS) ಈ ಪ್ರಯೋಗಾಲಯ ಮಾನ್ಯತೆ ಪಡೆದುಕೊಂಡಿದೆ.
ಭಾರತದಲ್ಲಿ ಟೆಲಿಕಾಂ ಮತ್ತು ಐಸಿಟಿ ಉತ್ಪನ್ನಗಳಿಗೆ ಭದ್ರತಾ ಪರೀಕ್ಷೆ ಮತ್ತು ಪ್ರಮಾಣೀಕರಿಸುವ ಚೌಕಟ್ಟನ್ನು ಜಾರಿಗೊಳಿಸಲು ರಾಷ್ಟ್ರೀಯ ಸಂವಹನ ಭದ್ರತಾ ಕೇಂದ್ರಕ್ಕೆ ಅವಕಾಶ ನೀಡಲಾಗಿದೆ. ಇದು ಟೆಲಿಕಾಂ ಸಲಕರಣೆಗಳ ಪರೀಕ್ಷೆ ಮತ್ತು ಪ್ರಮಾಣೀಕರಣ (MTCTE) ನಿಯಮಗಳ ವ್ಯಾಪ್ತಿಗೆ ಒಳಪಡುತ್ತದೆ.
‘ಈ ಮಾನ್ಯತೆಯಿಂದಾಗಿ ವಿದೇಶಿ ಪ್ರಯೋಗಾಲಯಗಳ ಮೇಲಿನ ಅವಲಂಬನೆ ತಗ್ಗಲಿದೆ. ಜತೆಗೆ ಶೈಕ್ಷಣಿಕ ಕೇಂದ್ರ ಮತ್ತು ಉದ್ಯಮದ ನಡುವೆ ಸೇತುವೆಯಾಗಿ ಕೆಲಸ ಮಾಡಲಿದೆ. ಇದರಿಂದ ಈ ಕ್ಷೇತ್ರದಲ್ಲಿ ಸಂಶೋಧನೆ, ನಾವೀನ್ಯತೆಗೂ ಅವಕಾಶ ಹೆಚ್ಚಾಗಲಿದೆ’ ಎಂದು ಐಐಟಿಎಂ ನಿರ್ದೇಶಕ ವಿ. ಕಾಮಕೋಟಿ ತಿಳಿಸಿದ್ದಾರೆ.
‘ಐಐಟಿ ಮದ್ರಾಸ್‌ನ ಪ್ರವರ್ತಕ್ ತಂತ್ರಜ್ಞಾನ ಸಂಸ್ಥೆಯು ಭಾರತೀಯ ಕಂಪನಿಗಳ ಕಾಯ್ದೆ ಸೆಕ್ಷನ್ 8ರ ಅಡಿಯಲ್ಲಿ ನೋಂದಣಿಯಾಗಿದೆ. ಸೆನ್ಸರ್, ನೆಟ್‌ವರ್ಕ್, ಆ್ಯಕ್ಚುಯೇಟರ್ ಮತ್ತು ನಿಯಂತ್ರಣ ವ್ಯವಸ್ಥೆಗಳಿಗೆ ಇದು ಪ್ರಮುಖ ಕೇಂದ್ರವಾಗಲಿದೆ’ ಎಂದಿದ್ದಾರೆ.
‘5G ಕೋರ್-ನೆಟ್‌ವರ್ಕ್ ಕಾರ್ಯವನ್ನು ಪರೀಕ್ಷಿಸಲು ಅಧಿಕಾರ ಹೊಂದಿರುವ ಭಾರತದ ಮೊದಲ ಪ್ರಯೋಗಾಲಯ ಇದಾಗಿದ್ದು, ಟೆಲಿಕಾಂ ನೆಟ್‌ವರ್ಕ್‌ಗಳ ಸುರಕ್ಷತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಖಚಿತಪಡಿಸಿಕೊಳ್ಳುವಲ್ಲಿ ಪ್ರಯೋಗಾಲಯದ ನಿರ್ಣಾಯಕ ಪಾತ್ರವನ್ನು ಈ ಪ್ರಮಾಣೀಕರಣವು ದೃಢಪಡಿಸಿದೆ’ ಎಂದು ಐಐಟಿಎಂ ಪ್ರವರ್ತಕ್ ಟೆಕ್ನಾಲಜೀಸ್ ಪ್ರತಿಷ್ಠಾನದ ಎಂ.ಜೆ. ಶಂಕರರಾಮನ್ ಸಿಇಒ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.