ADVERTISEMENT

ಮುಂಬೈ ಮಾಜಿ ಪೊಲೀಸ್‌ ಆಯುಕ್ತ ಪಾಂಡೆ ವಿರುದ್ಧ ಸಿಬಿಐನಿಂದ ಎಫ್‌ಐಆರ್‌

ಎನ್‌ಎಸ್‌ಇ ಉದ್ಯೋಗಿಗಳ ದೂರವಾಣಿ ಕರೆಗಳನ್ನು ಅಕ್ರಮವಾಗಿ ಕದ್ದಾಲಿಸಿದ ಆರೋಪ

ಪಿಟಿಐ
Published 8 ಜುಲೈ 2022, 10:32 IST
Last Updated 8 ಜುಲೈ 2022, 10:32 IST
ಸಿಬಿಐ
ಸಿಬಿಐ   

ನವದೆಹಲಿ: ರಾಷ್ಟ್ರೀಯ ಷೇರು ಪೇಟೆಯ (ಎನ್‌ಎಸ್ಇ) ಉದ್ಯೋಗಿಗಳ ದೂರವಾಣಿ ಕರೆಗಳನ್ನು ಅಕ್ರಮವಾಗಿ ಕದ್ದಾಲಿಸಿದ ಪ್ರಕರಣಕ್ಕೆ ಸಂಬಂಧಿಸಿ ಮುಂಬೈನ ಮಾಜಿ ಪೊಲೀಸ್‌ ಆಯುಕ್ತ ಸಂಜಯ್‌ ಪಾಂಡೆ ಹಾಗೂ ಎನ್‌ಎಸ್‌ಇ ಮಾಜಿ ಎಂ.ಡಿ ಹಾಗೂ ಸಿಇಒ ಚಿತ್ರಾ ರಾಮಕೃಷ್ಣ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿದೆ ಎಂದು ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.

ಈ ಕುರಿತು ಕೇಂದ್ರ ಗೃಹ ಸಚಿವಾಲಯ ದೂರು ನೀಡಿದ ಬೆನ್ನಲ್ಲೇ, ಸಿಬಿಐ ಕ್ರಮ ಕೈಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿ, ಎನ್‌ಎಸ್ಇ ಮಾಜಿ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ರವಿ ನಾರಾಯಣ್ ಅವರ ಹೆಸರನ್ನು ಸಹ ಸಿಬಿಐ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದೆ. ಪ್ರಕರಣ ಕುರಿತಂತೆ, ದೆಹಲಿ, ಮುಂಬೈ, ಪುಣೆ, ಕೋಟಾ, ಲಖನೌ, ಚಂಡೀಗಡ ಸೇರಿದಂತೆ 20 ಸ್ಥಳಗಳಲ್ಲಿ ಸಿಬಿಐ ಅಧಿಕಾರಿಗಳು ಶೋಧ ಕಾರ್ಯ ಕೈಗೊಂಡಿದ್ದಾರೆ ಎಂದೂ ಅವರು ಹೇಳಿದ್ದಾರೆ.

ADVERTISEMENT

‘ಐಸೆಕ್ ಸೆಕ್ಯುರಿಟೀಸ್ ಪ್ರೈ.ಲಿಮಿಟೆಡ್ ಸೇರಿದಂತೆ ಹಲವು ಸಂಸ್ಥೆಗಳು ಎನ್‌ಎಸ್ಇಯ ದತ್ತಾಂಶದ ಸುರಕ್ಷತೆಯ ಕುರಿತು ಪರಿಶೀಲನೆ ನಡೆಸಿದ್ದವು. ಈ ಪೈಕಿ, ಐಸೆಕ್ ಸೆಕ್ಯುರಿಟೀಸ್ ಕಂಪನಿಯು ಎನ್‌ಎಸ್‌ಇ ಉದ್ಯೋಗಿಗಳ ದೂರವಾಣಿ ಕರೆಗಳನ್ನು 2009–17 ಅವಧಿಯಲ್ಲಿ ಅಕ್ರಮವಾಗಿ ಕದ್ದಾಲಿಸಿತ್ತು ಎಂಬುದಾಗಿ ಆರೋಪಿಸಲಾಗಿದೆ’ ಎಂದು ಸಿಬಿಐ ಹೇಳಿದೆ.

ಪಾಂಡೆ ಹಾಗೂ ಚಿತ್ರಾ ರಾಮಕೃಷ್ಣ ಅವರು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.