ADVERTISEMENT

ಹಬ್ಬ: ಸ್ಥಳೀಯವಾಗಿ ನಿರ್ಬಂಧ ಹೇರಲು ಸೂಚನೆ

ಕೋವಿಡ್‌–19 ಮಾರ್ಗಸೂಚಿ ಅವಧಿ ಸೆ.30ರವರೆಗೆ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2021, 22:00 IST
Last Updated 28 ಆಗಸ್ಟ್ 2021, 22:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಸಾಲು ಸಾಲಾಗಿ ಹಬ್ಬಗಳು ಬರುತ್ತಿರುವ ಸಂದರ್ಭದಲ್ಲಿ, ಹೆಚ್ಚು ಜನರು ಒಂದೆಡೆ ಸೇರದಂತೆ ನೋಡಿಕೊಳ್ಳಬೇಕು ಹಾಗೂ ಕೊರೊನಾ ಸೋಂಕು ಪ್ರಸರಣವನ್ನು ತಡೆಯಲು ಅಗತ್ಯವಿದ್ದಲ್ಲಿ ಸ್ಥಳೀಯವಾಗಿ ಕಠಿಣ ನಿರ್ಬಂಧಗಳನ್ನು ಹೇರಬೇಕು ಎಂದು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಶನಿವಾರ ಸೂಚಿಸಿದೆ.

ಈ ಬಗ್ಗೆ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆಡಳಿತಾಧಿಕಾರಿಗಳಿಗೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಪತ್ರ ಬರೆದಿದ್ದಾರೆ. ಕೋವಿಡ್‌–19 ನಿರ್ವಹಣೆಗೆ ಸಂಬಂಧಿಸಿ, ಸದ್ಯಕ್ಕೆ ಅನುಷ್ಠಾನದಲ್ಲಿರುವ ಮಾರ್ಗಸೂಚಿಯನ್ನು ಸೆ.30ರವರೆಗೆ ವಿಸ್ತರಿಸಿದ್ದಾಗಿಯೂ ತಿಳಿಸಿದ್ದಾರೆ. ಜನರು ಮಾಸ್ಕ್‌ ಧರಿಸುವುದು ಕಡಿಮೆಯಾಗು
ತ್ತಿದ್ದು, ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದೂ ಎಚ್ಚರಿಸಿದ್ದಾರೆ.

ಕೆಲವು ರಾಜ್ಯಗಳಲ್ಲಿ ಕೋವಿಡ್‌ ಪ್ರಕರಣಗಳು ಸ್ಥಳೀಯವಾಗಿ ಹೆಚ್ಚುತ್ತಿವೆ. ಅದನ್ನು ಹೊರತುಪಡಿಸಿದರೆ, ದೇಶದಲ್ಲಿ ಸಾಂಕ್ರಾಮಿಕದ ಸ್ಥಿತಿ ಸ್ಥಿರವಾಗಿದೆ. ಆದರೆ, ಕೆಲವು ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣ ಹಾಗೂ ದೃಢಪಡುತ್ತಿರುವ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿನ ಹೆಚ್ಚಳವು ಆತಂಕಕಾರಿಯಾಗಿದೆ. ಹೀಗಾಗಿ, ಅಂತಹ ಜಿಲ್ಲೆಗಳಲ್ಲಿ ಸ್ಥಳೀಯವಾಗಿಯೇ ಪರಿಣಾಮಕಾರಿ ನಿರ್ಬಂಧ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ADVERTISEMENT

ಹಬ್ಬದ ಸಂದರ್ಭದಲ್ಲಿ ಅದರಲ್ಲೂ ಮಾರುಕಟ್ಟೆ ಪ್ರದೇಶದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಆದ್ದರಿಂದ, ಜನರು ಈ ರೀತಿ ಒಂದೇ ಕಡೆ ಸೇರುವುದನ್ನು ತಪ್ಪಿಸಲು ಸಮರ್ಪಕ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದರೊಂದಿಗೆ ಕೋವಿಡ್‌ ಪರೀಕ್ಷೆ, ಪತ್ತೆ, ಚಿಕಿತ್ಸೆ, ಲಸಿಕೆ ತೆಗೆದುಕೊಳ್ಳುವುದು ಹಾಗೂ ಕೋವಿಡ್‌–19 ಮಾರ್ಗಸೂಚಿಯ ಕಟ್ಟುನಿಟ್ಟಿನ ಪಾಲನೆಯನ್ನು ಮುಂದುವರಿಸಬೇಕು ಎಂದೂ ತಿಳಿಸಿದ್ದಾರೆ.

ಮಾಸ್ಕ್ ಧರಿಸುವುದು, ದೈಹಿಕ ಅಂತರ ಪಾಲನೆ ಹಾಗೂ ತಪ್ಪಿದವರಿಗೆ ದಂಡ ವಿಧಿಸಿದ ಪ್ರಕರಣಗಳು ಸೇರಿದಂತೆ ಮಾರ್ಗಸೂಚಿ ಪಾಲನೆಗೆ ಸಂಬಂಧಿಸಿ, ಪ್ರತೀ ವಾರ ರಾಜ್ಯಗಳು ಕಳುಹಿಸಿರುವ ಮಾಹಿತಿಯನ್ನು ಗಮನಿಸಿದರೆ, ಮಾರ್ಗಸೂಚಿಯ ಪಾಲನೆಯಲ್ಲಿ ನಿರ್ಲಕ್ಷ್ಯ ಕಂಡುಬರುತ್ತಿದೆ. ಆದ್ದರಿಂದ, ರಾಜ್ಯಗಳು ಈ ಬಗ್ಗೆ ಇನ್ನಷ್ಟು ನಿಗಾ ವಹಿಸಬೇಕು ಹಾಗೂ ಎಷ್ಟು ಸಾಧ್ಯವೋ ಅಷ್ಟು ಅರ್ಹ ನಾಗರಿಕರಿಗೆ ಲಸಿಕೆ ನೀಡುವುದಕ್ಕೆ ಒತ್ತು ಕೊಡಬೇಕು ಎಂದಿದ್ದಾರೆ.

ಕೋವಿಡ್‌ ಶೂನ್ಯ ಪ್ರಕರಣ ಅಥವಾ ಕಡಿಮೆ ಪ್ರಕರಣಗಳಿರುವ ಪ್ರದೇಶದಲ್ಲಿ ಸೋಂಕು ಹರಡದಂತೆ ನೋಡಿಕೊಳ್ಳುವುದು ಅತೀ ಅಗತ್ಯ ಎಂದಿರುವ ಅವರು, ಮಾರ್ಗಸೂಚಿ ಅನುಷ್ಠಾನದಲ್ಲಿ ಲೋಪ ಕಂಡು ಬಂದಲ್ಲಿ, ಸಂಬಂಧಿಸಿದ ಅಧಿಕಾರಿಯನ್ನೇ ವೈಯಕ್ತಿಕವಾಗಿ ಹೊಣೆ ಮಾಡುವಂತೆಯೂ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.