ADVERTISEMENT

ಕಾಶ್ಮೀರದಲ್ಲಿ ನಕಲಿ ಕೋವಿಡ್‌ ನೆಗೆಟಿವ್ ವರದಿಗಳ ಮಾರಾಟ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 10:46 IST
Last Updated 17 ಸೆಪ್ಟೆಂಬರ್ 2020, 10:46 IST
ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಕೋವಿಡ್‌ 19 ಸೋಂಕು ಪರೀಕ್ಷೆಗಾಗಿ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸುತ್ತಿರುವ ವೈದ್ಯಕೀಯ ಸಿಬ್ಬಂದಿ
ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಕೋವಿಡ್‌ 19 ಸೋಂಕು ಪರೀಕ್ಷೆಗಾಗಿ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸುತ್ತಿರುವ ವೈದ್ಯಕೀಯ ಸಿಬ್ಬಂದಿ   

ಶ್ರೀನಗರ: ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲ ದುರಾಸೆಯುಳ್ಳ ವ್ಯಕ್ತಿಗಳು ಜನರಿಂದ ಹಣ ಪಡೆದು ನಕಲಿ ಕೊರೊನಾ ಪರೀಕ್ಷೆಯ ನೆಗಟಿವ್ ವರದಿಗಳನ್ನು ಮಾರಾಟ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

ಈ ಸಂಬಂಧ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಬುಧವಾರ ಶ್ರೀನಗರದ ಟೂರಿಸ್ಟ್‌ ರಿಸೆಪ್ಷನ್‌ ಸೆಂಟರ್‌ನಲ್ಲಿ ಇಬ್ಬರು ಕಾರು ಚಾಲಕರನ್ನು ಬಂಧಿಸಿದ್ದಾರೆ. ಇವರು ಕಣಿವೆ ರಾಜ್ಯದಿಂದ ಹೊರ ರಾಜ್ಯಗಳಿಗೆ ಪ್ರಯಾಣ ಬೆಳೆಸುವ ಜನರಿಂದ ಹಣ ಪಡೆದು ನಕಲಿ ನೆಗೆಟಿವ್ ವರದಿಗಳನ್ನು ಪೂರೈಸುತ್ತಿದ್ದರು.

‘ಕೇವಲ ಹದಿನೈದು ನಿಮಿಷದಲ್ಲಿ ನಕಲಿ ಕೋವಿಡ್‌ 19 ನೆಗೆಟಿವ್ ಪರೀಕ್ಷೆ ವರದಿಗಳನ್ನು ಇವರು ಪೂರೈಸುತ್ತಿದ್ದರು‘ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಕಾಶ್ಮೀರದಿಂದ ಹೊರಗಡೆ ಪ್ರಯಾಣಿಸುತ್ತಿದ್ದ ಕುಟುಂಬವೊಂದಕ್ಕೆ ಹಣ ಪಡೆದು ನಕಲಿ ಕೋವಿಡ್‌ 19 ನೆಗೆಟಿವ್ ವರದಿ ನೀಡಲು ವ್ಯವಸ್ಥೆ ಮಾಡುತ್ತಿದ್ದ ವೇಳೆ ಪೊಲೀಸರು ಈ ಇಬ್ಬರು ಕಾರುಚಾಲಕರನ್ನು ಬಂಧಿಸಿದ್ದಾರೆ.

‘ಕೆಲವೊಂದು ಖಾಸಗಿ ಪ್ರಯೋಗಾಲಯಗಳು ಇಂಥ ನಕಲಿ ಕೋವಿಡ್‌ 19 ನೆಗೆಟಿವ್ ವರದಿಗಳನ್ನು ಪೂರೈಸುವ ಪ್ರಕರಣದಲ್ಲಿ ಭಾಗಿಯಾಗಿದ್ದು, ಇದರಿಂದ ಜೀವಹಾನಿಯೂ ಸಂಭವಿಸಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ತನಿಖೆ ನಡೆಯಲಿದೆ‘ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‌ಅಕ್ಟೋಬರ್ ತಿಂಗಳ ನಂತರ ಚಳಿಗಾಲ ಆರಂಭವಾಗಲಿದ್ದು, ಆಗ ಕಣಿವೆ ರಾಜ್ಯದಿಂದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಗರಿಗೆದರಲಿವೆ. ಆಗ ಬಹಳಷ್ಟು ಮಂದಿ ಇಲ್ಲಿಂದ ಹೊರ ರಾಜ್ಯಗಳಿಗೆ ಪ್ರಯಾಣ ಬೆಳೆಸುತ್ತಾರೆ. ಜತೆಗೆ ಕೆಲವೊಂದು ಸಂಸ್ಥೆಗಳು, ಕೆಲಸಕ್ಕೆ ವಾಪಸ್ ಆಗುತ್ತಿರುವ ಸಿಬ್ಬಂದಿಯಿಂದಲೂ ಕೋವಿಡ್ ನೆಗೆಟಿವ್ ರಿಪೋರ್ಟ್ ಕೇಳುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ‘ನಕಲಿ ಕೋವಿಡ್‌ 19 ನೆಗೆಟಿವ್ ವರದಿ‘ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದ್ದು, ಇದನ್ನು ನಿಯಂತ್ರಿಸುವುದೇ ಪೊಲೀಸ್ ಇಲಾಖೆಗೆ ಒಂದು ದೊಡ್ಡ ಸವಾಲಾಗಲಿದೆ‘ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ‘ಗೆ ತಿಳಿಸಿದ್ದಾರೆ.

‘ಈ ದುಷ್ಕೃತ್ಯಕ್ಕೆ ಕಡಿವಾಣ ಹಾಕದಿದ್ದರೆ ಭವಿಷ್ಯದಲ್ಲಿ ಗಂಭೀರ ಪರಿಣಾಮ ಎದುರಾಗುತ್ತದೆ‘ ಎಂದು ಆರೋಗ್ಯ ಪರಿಣತರು ಎಚ್ಚರಿಸಿದ್ದಾರೆ. ನಕಲಿ ನೆಗೆಟಿವ್ ವರದಿ ಇಟ್ಟುಕೊಂಡ ವ್ಯಕ್ತಿ ಯಾವುದಾದರೂ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್‌ ವರದಿ ಪಾಸಿಟಿವ್ ಬಂದರೆ, ಭಯಾನಕ ಫಲಿತಾಂಶವನ್ನು ಎದುರಿಸಬೇಕಾಗುತ್ತದೆ‘ ಎಂದು ಶ್ರೀನಗರದ ಖಾಸಗಿ ಆಸ್ಪತ್ರೆಯ ವೈದ್ಯ ಡಾ. ಅರ್ಷಿದ್ ಅಹ್ಮದ್‌ ಹೇಳಿದ್ದಾರೆ.

ಸದ್ಯ ಜಮ್ಮ ಮತ್ತು ಕಾಶ್ಮೀರದಲ್ಲಿ ಕೊರೊನಾ ಸೋಂಕಿನ ಪರಿಸ್ಥಿತಿ ಆತಂಕ ಸೃಷ್ಟಿಸಿದೆ. ಕಣಿವೆ ರಾಜ್ಯದಲ್ಲಿರುವ 12 ಲಕ್ಷ ಜನಸಂಖ್ಯೆಯಲ್ಲಿ 58, 224 ಮಂದಿಗೆ ಸೋಂಕು ದೃಢಪಟ್ಟಿದ್ದು, 932 ಮಂದಿ ಸಾವನ್ನಪ್ಪಿರುವುದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.