ವಾಷಿಂಗ್ಟನ್: 2ನೇ ಬಾರಿಗೆ ಅಮೆರಿಕ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನ್ಯಾಯಯುತ ದ್ವಿಪಕ್ಷೀಯ ವ್ಯಾಪಾರ ಸಂಬಂಧ ಮತ್ತು ಆಳವಾದ ಭಾರತ-ಅಮೆರಿಕ ಸಹಕಾರದತ್ತ ಸಾಗುವ ಕುರಿತಂತೆ ಚರ್ಚಿಸಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.
ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡುವ ಯೋಜನೆಗಳ ಬಗ್ಗೆಯೂ ಉಭಯ ನಾಯಕರು ಚರ್ಚಿಸಿದ್ದಾರೆ ಎಂದು ಶ್ವೇತಭವನ ಹೇಳಿದೆ.
‘ಇಂದು, ಅಧ್ಯಕ್ಷ ಡೊನಾಲ್ಡ್ ಜೆ ಟ್ರಂಪ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಉತ್ಪಾದಕ ಮಾತುಕತೆ ನಡೆಸಿದರು. ಉಭಯ ನಾಯಕರು ಸಹಕಾರವನ್ನು ವಿಸ್ತರಿಸುವ ಮತ್ತು ಗಾಢಗೊಳಿಸುವ ಬಗ್ಗೆ ಚರ್ಚಿಸಿದರು’ ಎಂದು ಪ್ರಕಟಣೆ ತಿಳಿಸಿದೆ.
ಇಂಡೋ-ಪೆಸಿಫಿಕ್, ಮಧ್ಯಪ್ರಾಚ್ಯ ಮತ್ತು ಯುರೋಪ್‌ನಲ್ಲಿ ಭದ್ರತೆ ಸೇರಿದಂತೆ ಹಲವು ಪ್ರಾದೇಶಿಕ ವಿಷಯಗಳ ಕುರಿತೂ ಚರ್ಚಿಸಿದ್ದಾರೆ.
‘ಅಮೆರಿಕ ತಯಾರಿಸುವ ಭದ್ರತಾ ಸಲಕರಣೆಗಳ ಖರೀದಿಯನ್ನು ಭಾರತ ಹೆಚ್ಚಿಸುವ ಮತ್ತು ನ್ಯಾಯಯುತ ದ್ವಿಪಕ್ಷೀಯ ವ್ಯಾಪಾರ ಸಂಬಂಧದತ್ತ ಸಾಗಬೇಕಾದ ಮಹತ್ವವನ್ನು ಅಧ್ಯಕ್ಷರು ಒತ್ತಿ ಹೇಳಿದ್ದಾರೆ’ ಎಂದು ಶ್ವೇತಭವನ ತಿಳಿಸಿದೆ.
ಮೋದಿ ಮತ್ತು ಟ್ರಂಪ್ ಇಬ್ಬರೂ ಅಮೆರಿಕ-ಭಾರತದ ಕಾರ್ಯತಂತ್ರದ ಪಾಲುದಾರಿಕೆ ಮತ್ತು ಇಂಡೋ-ಪೆಸಿಫಿಕ್ ಕ್ವಾಡ್ ಪಾಲುದಾರಿಕೆಯನ್ನು ಮುನ್ನಡೆಸಲು ತಮ್ಮ ಬದ್ಧತೆಯನ್ನು ಒತ್ತಿ ಹೇಳಿದ್ದಾರೆ. ಈ ವರ್ಷದ ಕೊನೆಯಲ್ಲಿ ಭಾರತವು ಮೊದಲ ಬಾರಿಗೆ ಕ್ವಾಡ್ ನಾಯಕರ ಶೃಂಗ ಸಭೆಯನ್ನು ಆಯೋಜಿಸುತ್ತಿದೆ.
ಅನೇಕ ದೇಶಗಳಲ್ಲಿರುವಂತೆ, ಟ್ರಂಪ್ ಆಡಳಿತದ ವಲಸೆ ಮತ್ತು ಸುಂಕಗಳ ವಿಧಾನದ ಬಗ್ಗೆ ಭಾರತದಲ್ಲಿಯೂ ಕೆಲವು ಕಳವಳಗಳಿವೆ. ಭಾರತವನ್ನೂ ಒಳಗೊಂಡಿರುವ ಬ್ರಿಕ್ಸ್ ರಾಷ್ಟ್ರಗಳ ಮೇಲೆ 100ರಷ್ಟು ತೆರಿಗೆ ವಿಧಿಸುವ ಬಗ್ಗೆ ಟ್ರಂಪ್ ಈಗಾಗಲೇ ಮಾತನಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.