ADVERTISEMENT

ಕಾನ್‌ಸ್ಟೆಬಲ್‌ ಹತ್ಯೆಗೆ ರಾಜಕೀಯ ಬಣ್ಣ; ಯೋಗಿ ಸರ್ಕಾರದ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2018, 20:10 IST
Last Updated 30 ಡಿಸೆಂಬರ್ 2018, 20:10 IST
   

ನವದೆಹಲಿ: ಉತ್ತರ ಪ್ರದೇಶದ ಗಾಜಿಪುರದಲ್ಲಿ ಶನಿವಾರ ನಡೆದ ಕಲ್ಲು ತೂರಾಟಕ್ಕೆ ಪೊಲೀಸ್‌ ಕಾನ್‌ಸ್ಟೆಬಲ್‌ ಬಲಿಯಾದ ಘಟನೆ ರಾಜಕೀಯ ಬಣ್ಣ ಪಡೆದುಕೊಂಡಿದೆ.

ಬುಲಂದ್‌ಶಹರ್‌ನಲ್ಲಿ ಪೊಲೀಸ್‌ ಅಧಿಕಾರಿ ಸುಬೋಧ್‌ ಸಿಂಗ್‌ ಹತ್ಯೆ ನಡೆದು ತಿಂಗಳಾಗುವ ಮೊದಲೇ ಉತ್ತರ ಪ್ರದೇಶದಲ್ಲಿ ಮತ್ತೊಬ್ಬ ಪೊಲೀಸ್‌ ಸಿಬ್ಬಂದಿ ಹತ್ಯೆ ನಡೆದಿದೆ. ಇದರಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸರ್ಕಾರದ ವಿರುದ್ಧ ಟೀಕೆಗಳು ಕೇಳಿ ಬರುತ್ತಿವೆ.

‘ಸರ್ಕಾರಕ್ಕೆ ಗೊತ್ತಿರುವ ಏಕೈಕ ಭಾಷೆ ಎಂದರೆ ಅದು ಹಿಂಸಾಚಾರ. ಸ್ವತಃ ಮುಖ್ಯಮಂತ್ರಿಗಳೇ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಾರೆ. ಇದರಿಂದಾಗಿಯೇ ಈ ಘಟನೆ ನಡೆದಿದೆ’ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಭಾನುವಾರ ವಾಗ್ದಾಳಿ ನಡೆಸಿದ್ದಾರೆ.

ADVERTISEMENT

‘ಸದನದ ಒಳಗೆ ಮತ್ತು ಹೊರಗೆ ಯೋಗಿ ಬಾಯ್ಬಿಟ್ಟರೆ ಕೊಲೆ, ಹಿಂಸಾಚಾರಕ್ಕೆ ಪ್ರಚೋದಿಸುವ ಅಣಿಮುತ್ತುಗಳೇ ಉದುರುತ್ತವೆ. ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಹದಗೆಟ್ಟಿದೆ’ ಎಂದು ಅವರು ಆರೋಪಿಸಿದ್ದಾರೆ.

ಈ ನಡುವೆ ಮೃತ ಕಾನ್‌ಸ್ಟೆಬಲ್‌ ಪುತ್ರ ವಿ.ಕೆ. ಸಿಂಗ್‌ ಕೂಡ ‘ನನ್ನ ತಂದೆಯ ಸಾವಿಗೆ ಪೊಲೀಸರೇ ಕಾರಣ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಸಹೋದ್ಯೋಗಿಯನ್ನೇ ಕಾಪಾಡದ ಪೊಲೀಸರು ಇನ್ನು ಜನಸಾಮಾನ್ಯರನ್ನು ಹೇಗೆ ಕಾಪಾಡುತ್ತಾರೆ’ ಎಂದು ಅವರು ಪ್ರಶ್ನಿಸಿದ್ದಾರೆ.

ಮೃತರ ಕುಟುಂಬಕ್ಕೆ ₹40 ಲಕ್ಷ ಪರಿಹಾರ

ಗಾಜಿಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ಮುಗಿಸಿಕೊಂಡು ಮರಳುತ್ತಿದ್ದ ವೇಳೆ ನಡೆದ ಕಲ್ಲುತೂರಾಟದಲ್ಲಿ ಮೃತಪಟ್ಟ ಕಾನ್‌ಸ್ಟೆಬಲ್‌ ಸುರೇಶ್‌ ವತ್ಸ ಕುಟುಂಬಕ್ಕೆ ಉತ್ತರ ಪ್ರದೇಶ ಸರ್ಕಾರ ₹40 ಲಕ್ಷ ಪರಿಹಾರ ಘೋಷಿಸಿದೆ. ತಕ್ಷಣ ತಪ್ಪಿತಸ್ಥರನ್ನು ಬಂಧಿಸಿ, ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಪೊಲೀಸರಿಗೆ ಸೂಚಿಸಿದ್ದಾರೆ.

‘ಮೃತರ ಕುಟುಂಬಕ್ಕೆ ಪರಿಹಾರ ಮತ್ತು ಅನುಕಂಪದ ಆಧಾರದ ಮೇಲೆ ನೌಕರಿ ಕೊಡುವುದೊಂದೇ ಪರಿಹಾರವಲ್ಲ. ಹಿಂಸಾಚಾರ ಮತ್ತು ಅಪರಾಧಗಳಿಗೆ ಇದರಿಂದ ಕಡಿವಾಣ ಹಾಕುವುದು ಸಾಧ್ಯವಿಲ್ಲ’ ಎಂದು ಮೃತ ಪೊಲೀಸ್‌ ಕಾನ್‌ಸ್ಟೆಬಲ್‌ ವತ್ಸ ಕುಟುಂಬ ಅಸಮಾಧಾನ ವ್ಯಕ್ತಪಡಿಸಿದೆ.

ಬುಲಂದ್‌ಶಹರ್‌ ಮತ್ತು ಪ್ರತಾಪಗಡಗಳಲ್ಲಿ ಕೂಡ ಇಂತಹ ಘಟನೆ ನಡೆದಿವೆ. ಹುತಾತ್ಮ ಪೊಲೀಸರ ಜೀವಗಳಿಗೆ ಬೆಲೆ ಕಟ್ಟಲು ಸರ್ಕಾರಕ್ಕೆ ಸಾಧ್ಯವಿಲ್ಲ ಎಂದು ಕುಟುಂಬ ಸದಸ್ಯರು ಆಕ್ರೋಶ ಹೊರ ಹಾಕಿದ್ದಾರೆ.

11 ಮಂದಿ ಬಂಧನ: ಈ ಘಟನೆ ಸಂಬಂಧ 32 ಜನರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದ್ದು, ಈಗಾಗಲೇ 11 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಭಾಗಿಯಾಗಿದ್ದ 80 ಜನ ಅಪರಿಚಿತರು ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.