ADVERTISEMENT

ಹಿಮಾಚಲ ಪ್ರದೇಶ | ರಾಜೀನಾಮೆ ಅಂಗೀಕಾರ ವಿಳಂಬ: ಶಾಸಕರ ಪ್ರತಿಭಟನೆ

ಪಿಟಿಐ
Published 30 ಮಾರ್ಚ್ 2024, 15:39 IST
Last Updated 30 ಮಾರ್ಚ್ 2024, 15:39 IST
ಹಿಮಾಚಲ ಪ್ರದೇಶದ ಮೂವರು ಪಕ್ಷೇತರ ಶಾಸಕರಾದ ಕೆ.ಎಲ್.ಠಾಕೂರ್, ಹೋಷಿಯಾರ್ ಸಿಂಗ್ ಮತ್ತು ಅಶೀಶ್ ಶರ್ಮಾ ಅವರು ನವದೆಹಲಿಯಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ್ತಿತರರ ಸಮ್ಮುಖದಲ್ಲಿ ಮಾರ್ಚ್ 23ರಂದು ಬಿಜೆಪಿ ಸೇರಿದ್ದರು.
ಪಿಟಿಐ ಚಿತ್ರ
ಹಿಮಾಚಲ ಪ್ರದೇಶದ ಮೂವರು ಪಕ್ಷೇತರ ಶಾಸಕರಾದ ಕೆ.ಎಲ್.ಠಾಕೂರ್, ಹೋಷಿಯಾರ್ ಸಿಂಗ್ ಮತ್ತು ಅಶೀಶ್ ಶರ್ಮಾ ಅವರು ನವದೆಹಲಿಯಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ್ತಿತರರ ಸಮ್ಮುಖದಲ್ಲಿ ಮಾರ್ಚ್ 23ರಂದು ಬಿಜೆಪಿ ಸೇರಿದ್ದರು. ಪಿಟಿಐ ಚಿತ್ರ   

ಶಿಮ್ಲಾ: ಹಿಮಾಚಲ ಪ್ರದೇಶದ ವಿಧಾನಸಭೆಯ ಸ್ಪೀಕರ್ ಕುಲ್‌ದೀಪ್ ಸಿಂಗ್ ಪಥಾನಿಯಾ ತಮ್ಮ ರಾಜೀನಾಮೆ ಅಂಗೀಕರಿಸುವುದರಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಮೂವರು ಪಕ್ಷೇತರ ಶಾಸಕರು ಶನಿವಾರ ವಿಧಾನಸಭೆಯಲ್ಲಿ ಧರಣಿ ನಡೆಸಿದರು.

ಶಾಸಕರಾದ ಹೋಷಿಯಾರ್ ಸಿಂಗ್, ಅಶೀಶ್ ಶರ್ಮಾ, ಕೆ.ಎಲ್‌.ಠಾಕೂರ್ ಅವರು ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸಿದ್ದರು. ಮಾರ್ಚ್ ಎರಡರಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅವರು ಮಾರನೇ ದಿನ ಬಿಜೆಪಿ ಸೇರಿದ್ದರು.

‘ನಾವು ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದೇವೆ. ಅದನ್ನು ತಕ್ಷಣವೇ ಅಂಗೀಕರಿಸಬೇಕು’ ಎನ್ನುವ ಭಿತ್ತಿಪತ್ರ ಹಿಡಿದು ಅವರು ಪ್ರತಿಭಟಿಸಿದರು.

ADVERTISEMENT

ಸ್ವಇಚ್ಛೆಯಿಂದ ರಾಜೀನಾಮೆ ನೀಡಿರುವರೋ ಅಥವಾ ಒತ್ತಾಯದಿಂದ ರಾಜೀನಾಮೆ ನೀಡಿರುವರೋ ಎನ್ನುವುದರ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ವಿಧಾನಸಭೆಯಿಂದ ಶಾಸಕರಿಗೆ ನೋಟಿಸ್ ನೀಡಲಾಗಿತ್ತು.   

‘ನಾವು ಪಕ್ಷೇತರ ಶಾಸಕರು, ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ರಾಜೀನಾಮೆ ನೀಡುವುದಕ್ಕೆ ಸ್ವತಂತ್ರರು. ಒತ್ತಾಯಕ್ಕೆ ಮಣಿದು ರಾಜೀನಾಮೆ ಸಲ್ಲಿಸಿದ್ದೇವೆ ಎಂದರೆ ತಪ್ಪಾಗುತ್ತದೆ. ನಮ್ಮ ರಾಜೀನಾಮೆಯನ್ನು ತಕ್ಷಣವೇ ಅಂಗೀಕರಿಸಬೇಕು’ ಎಂದು ಹೋಷಿಯಾರ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.

‘ಪಕ್ಷೇತರ ಶಾಸಕರ ರಾಜೀನಾಮೆ ಅಂಗೀಕರಿಸದೇ ಇರುವುದು ಅಸಾಂವಿಧಾನಿಕ ಮತ್ತು ಕಾನೂನುಬಾಹಿರ ಆಗಿದೆ. ಹುದ್ದೆಗೆ ರಾಜೀನಾಮೆ ಸಲ್ಲಿಸುವುದು ಯಾವುದೇ ವ್ಯಕ್ತಿಯ ಹಕ್ಕಾಗಿದೆ’ ಎಂದು ಹಿಮಾಚಲ ಪ್ರದೇಶದ ಬಿಜೆಪಿ ಮುಖ್ಯಸ್ಥ ರಾಜೀವ್ ಬಿಂದಾಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.