ADVERTISEMENT

ಕೋವಿಡ್‌ ಪೀಡಿತರ ಚಿಕಿತ್ಸೆಗೆ ಡೆಕ್ಸಾಮೆಥಾಸೊನ್‌

ಕೇಂದ್ರ ಅನುಮತಿ: ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಚಿಕಿತ್ಸೆಗೆ ಬಳಕೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2020, 11:08 IST
Last Updated 27 ಜೂನ್ 2020, 11:08 IST
   

ನವದೆಹಲಿ: ಕೋವಿಡ್‌ ಬಾಧಿತರ ಚಿಕಿತ್ಸೆಗೆಡೆಕ್ಸಾಮೆಥಾಸೊನ್‌ ಸ್ಟಿರಾಯ್ಡ್‌ ಪರಿಣಾಮಕಾರಿ ಎಂಬುದು ಪ್ರಯೋಗಾಲಯಗಳಿಂದ ಸಾಬೀತಾದ ಹಿನ್ನೆಲೆಯಲ್ಲಿ, ತೀವ್ರ ಬಾಧಿತರಾಗಿರುವ ರೋಗಿಗಳ ಚಿಕಿತ್ಸೆಗೆ ಇದನ್ನು ಬಳಸಬಹುದು ಎಂದು ಕೇಂದ್ರ ಸರ್ಕಾರ ಶನಿವಾರ ಅನುಮತಿ ನೀಡಿದೆ.

ಕೋವಿಡ್ ಚಿಕಿತ್ಸೆಗೆ ಅನುಸರಿಸಬೇಕಾದ ಕ್ರಮಗಳಿಗೆ ಸಂಬಂಧಿಸಿದ ‘ಕೋವಿಡ್‌–19: ಚಿಕಿತ್ಸಾ ನಿರ್ವಹಣೆ ನಿಯಮ’ಗಳನ್ನು ಕೇಂದ್ರ ಸರ್ಕಾರ ಪರಿಷ್ಕರಿಸಿದೆ. ಮೀಥೈಲ್‌‌ಪ್ರೆಡ್ನಿಸೊಲೊನ್‌ ಔಷಧಕ್ಕೆ ಪರ್ಯಾಯವಾಗಿ ಇದನ್ನು ಬಳಸಬಹುದು ಎಂದು ಸೂಚಿಸಿದೆ.

ಭಾರತದಲ್ಲಿ ಸೋಂಕು ಪ್ರಕರಣಗಳು ಗಣನೀಯವಾಗಿ ಏರುತ್ತಿದೆ. ಕಳೆದ 24 ಗಂಟೆಗಳಲ್ಲಿ 18,552 ಪ್ರಕರಣಗಳು ವರದಿಯಾಗಿದ್ದು, 384 ಮಂದಿ ಸತ್ತಿದ್ದಾರೆ. ಸೋಂಕು ಪ್ರಕರಣಗಳ ಸಂಖ್ಯೆ 5,08,953ಕ್ಕೆ ಏರಿದೆ.

ADVERTISEMENT

ಸಂಧಿವಾತ ಮತ್ತು ಇತರೆ ರೋಗಗಳಲ್ಲಿ ಉರಿಯೂತದ ನೋವು ಕಡಿಮೆ ಮಾಡಲು ಸಾಮಾನ್ಯವಾಗಿ ಡೆಕ್ಸಾಮೆಥಾಸೊನ್‌ ಔಷಧ ಬಳಸಲಾಗುತ್ತದೆ. ವೆಂಟಿಲೇಟರ್ ನೆರವಿನಲ್ಲಿ ಇರುವ, ಉರಿಯೂತದಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗೆ ಇದನ್ನು ಬಳಸಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಇತ್ತೀಚೆಗೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಕೊರೊನಾದಿಂದ ತೀವ್ರ ಬಾಧಿತರಾಗಿದ್ದ 2000ಕ್ಕೂ ಅಧಿಕ ರೋಗಿಗಳ ಮೇಲೆ ಡೆಕ್ಸಾಮೆಥಾಸೊನ್ ಅನ್ನು ಪ್ರಯೋಗ ಮಾಡಿದ್ದರು. ಈ ರೋಗಿಗಳಲ್ಲಿ ಉಸಿರಾಟಕ್ಕೆ ವೆಂಟಿಲೇಟರ್‌ ನೆರವು ಪಡೆದಿದ್ದ ರೋಗಿಗಳೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.