ADVERTISEMENT

ಭಾರತ ಮೂಲದ ಮಾರಿಷಸ್‌ ಪ್ರಜೆಗಳಿಗೆ ಒಸಿಐ ಕಾರ್ಡ್

ಪಿಟಿಐ
Published 12 ಮಾರ್ಚ್ 2024, 13:14 IST
Last Updated 12 ಮಾರ್ಚ್ 2024, 13:14 IST
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾರಿಷಸ್‌ ಪ್ರಧಾನಿ ಪ್ರವಿಂದ್‌ ಜಗನ್ನಾಥ್‌ ಅವರಿಗೆ ರುಪೇ ಕಾರ್ಡ್‌ ನೀಡಿದರು –ಪಿಟಿಐ ಚಿತ್ರ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾರಿಷಸ್‌ ಪ್ರಧಾನಿ ಪ್ರವಿಂದ್‌ ಜಗನ್ನಾಥ್‌ ಅವರಿಗೆ ರುಪೇ ಕಾರ್ಡ್‌ ನೀಡಿದರು –ಪಿಟಿಐ ಚಿತ್ರ   

ಪೋರ್ಟ್‌ ಲೂಯಿಸ್: ಮಾರಿಷಸ್‌ನಲ್ಲಿ ನೆಲೆಸಿರುವ ಏಳನೇ ತಲೆಮಾರಿನ ಭಾರತದ ಪ್ರಜೆಗಳಿಗೆ ಸಾಗರೋತ್ತರ ಭಾರತೀಯ ನಾಗರಿಕ (ಒಸಿಐ) ಕಾರ್ಡ್‌ ನೀಡಲಾಗುವುದು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಘೋಷಿಸಿದ್ದಾರೆ.

ಮಾರಿಷಸ್‌ ಪ್ರಧಾನಿ ಪ್ರವಿಂದ್‌ ಕುಮಾರ್‌ ಜಗನ್ನಾಥ್‌ ಜತೆ ಸೋಮವಾರ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ ಅವರು ಈ ವಿಷಯ ಪ್ರಕಟಿಸಿದರು.

‘ಮಾರಿಷಸ್‌ನಲ್ಲಿ ನೆಲೆಸಿರುವ ಭಾರತ ಮೂಲದವರಿಗೆ ಒಸಿಐ ಕಾರ್ಡ್‌ ಒದಗಿಸುವ ವಿಶೇಷ ಕಾನೂನಿಗೆ ಭಾರತ ಸರ್ಕಾರ ಅನುಮೋದನೆ ನೀಡಿರುವುದನ್ನು ತಿಳಿಸಲು ತುಂಬಾ ಸಂತಸವಾಗುತ್ತಿದೆ. ಇದು, ಮಾರಿಷಸ್‌ನಲ್ಲಿರುವ ಭಾರತ ಮೂಲದ ಯುವ ಜನರಿಗೆ ಭಾರತದ ಸಾಗರೋತ್ತರ ಪ್ರಜೆಗಳಾಗಲು ಹಾಗೂ ತಮ್ಮ ಪೂರ್ವಜರ ನಾಡಿನ ಜತೆ ಸಂಪರ್ಕ ಸಾಧಿಸಲು ಅನುವು ಮಾಡಿಕೊಡಲಿದೆ’ ಎಂದು ಹೇಳಿದರು.

ADVERTISEMENT

ಮಾರಿಷಸ್‌ನ ಗಂಗಾ ತಲಾವ್‌ ಪ್ರದೇಶವನ್ನು ಧಾರ್ಮಿಕ, ಸಾಂಸ್ಕೃತಿಕ ಮತ್ತು ಪ್ರವಾಸಿ ತಾಣವನ್ನಾಗಿ ಮರು ಅಭಿವೃದ್ದಿಪಡಿಸಲು ಭಾರತ ಸರ್ಕಾರವು, ಮಾರಿಷಸ್‌ಗೆ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಅವರು ತಿಳಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಕೆಲ ವಾರಗಳ ಹಿಂದೆ ಮಾರಿಷಸ್‌ಗೆ ಭೇಟಿ ನೀಡಿದ್ದರಲ್ಲದೆ, ಭಾರತದ ಹಣಕಾಸಿನ ನೆರವಿನಿಂದ ನಿರ್ಮಿಸಿರುವ ರನ್‌ ವೇ ಹಾಗೂ ಜೆಟ್ಟಿಯನ್ನು ಉದ್ಘಾಟಿಸಿದ್ದರು. ಭಾರತದ ರುಪೇ ಕಾರ್ಡ್‌ ಸೇವೆಗೂ ಚಾಲನೆ ನೀಡಿದ್ದರು. ಈಚೆಗಿನ ವರ್ಷಗಳಲ್ಲಿ ಉಭಯ ದೇಶಗಳ ನಡುವಣ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿದೆ’ ಎಂದು ನುಡಿದರು.

ಮೂರು ದಿನಗಳ ಮಾರಿಷಸ್‌ ಭೇಟಿಗೆ ತೆರಳಿರುವ ಮುರ್ಮು ಅವರು ದ್ವೀಪರಾಷ್ಟ್ರದ 56ನೇ ರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.