ADVERTISEMENT

ಕೋವಿಡ್ | ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ, ರಷ್ಯಾ ಹಿಂದಿಕ್ಕುವತ್ತ ಭಾರತ

ಮತ್ತೆ 22 ಸಾವಿರ ಹೊಸ ಪ್ರಕರಣಗಳು

​ಪ್ರಜಾವಾಣಿ ವಾರ್ತೆ
Published 4 ಜುಲೈ 2020, 20:34 IST
Last Updated 4 ಜುಲೈ 2020, 20:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ನವದೆಹಲಿ: ದೇಶದಾದ್ಯಂತ ಕೋವಿಡ್‌ ಪೀಡಿತರ ಸಂಖ್ಯೆಯು ತೀವ್ರಗತಿಯಲ್ಲಿ ಏರಿಕೆ ಆಗುತ್ತಿದ್ದು, ಜಗತ್ತಿನಲ್ಲಿ ಅತ್ಯಧಿಕ ಬಾಧೆಗೊಳಗಾದ ದೇಶಗಳ ಪಟ್ಟಿಯಲ್ಲಿ ಭಾರತವು ಈಗ ರಷ್ಯಾವನ್ನು ಹಿಂದಿಕ್ಕುವತ್ತ ಸಾಗಿದೆ.

ಸತತ ಎರಡನೇ ದಿನವೂ ದೇಶದಲ್ಲಿ ವರದಿಯಾದ ಪ್ರಕರಣಗಳ ಸಂಖ್ಯೆ 20 ಸಾವಿರಕ್ಕಿಂತಲೂ ಹೆಚ್ಚಾಗಿದೆ. ಹೀಗಾಗಿ ಒಟ್ಟು ಪ್ರಕರಣಗಳ ಸಂಖ್ಯೆ 6.67 ಲಕ್ಷದ ಗಡಿಯನ್ನು ತಲುಪಿದೆ. ಶನಿವಾರ 26,301 ಹೊಸ ಪ್ರಕರಣಗಳು ದಾಖಲಾಗಿವೆ. 615 ಮಂದಿ ಮೃತಪಟ್ಟಿದ್ದಾರೆ.

ಒಟ್ಟಾರೆ 6.73 ಲಕ್ಷ ಪ್ರಕರಣಗಳನ್ನು ಹೊಂದಿರುವ ರಷ್ಯಾ, ಸದ್ಯ ಜಾಗತಿಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಅಲ್ಲಿ ನಿತ್ಯ ಸರಾಸರಿ 6,500 ಹೊಸ ಪ್ರಕರಣಗಳಷ್ಟೇ ದಾಖಲಾಗುತ್ತಿವೆ. ಹೀಗಾಗಿ ಭಾರಿ ಸಂಖ್ಯೆಯಲ್ಲಿ ಪ್ರಕರಣಗಳನ್ನು ಕಾಣುತ್ತಿರುವ ಭಾರತ, ರಷ್ಯಾವನ್ನು ಹಿಂದೆ ಹಾಕುವುದು ನಿಚ್ಚಳವಾಗಿದೆ.

ADVERTISEMENT

ದೇಶದಲ್ಲೇ ಸೋಂಕಿತರ ಸಂಖ್ಯೆ ಮಹಾರಾಷ್ಟ್ರದಲ್ಲಿ ಹೆಚ್ಚಿದೆ. ಆ ರಾಜ್ಯವನ್ನು ಬಿಟ್ಟರೆ ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲೂ ಪ್ರಕರಣಗಳ ಸಂಖ್ಯೆ ಹೆಚ್ಚಾಗಿವೆ. ಈ ಮಧ್ಯೆ ಕಾಯಿಲೆಯಿಂದ ಗುಣಮುಖರಾದವರ ಸಂಖ್ಯೆಯೂ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದ್ದು, ಶುಕ್ರವಾರ ಮತ್ತು ಶನಿವಾರದ ನಡುವೆ 15,508 ಜನ ಆಸ್ಪತ್ರೆಗಳಿಂದ ಮನೆಗೆ ತೆರಳಿದರು.

ಇದುವರೆಗೆ 4,07,911 ಜನ ಕಾಯಿಲೆಯಿಂದ ಗುಣಮುಖರಾಗಿದ್ದು, ಚೇತರಿಕೆ ಪ್ರಮಾಣ ಶೇ 60.81ರಷ್ಟಿದೆ. ದೇಶದಲ್ಲಿ ಒಟ್ಟಾರೆ 95.40 ಲಕ್ಷ ಜನರನ್ನು ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.