ADVERTISEMENT

ಚೀನಾ ಗಡಿಯಲ್ಲಿ ರಸ್ತೆಗೆ ₹21 ಸಾವಿರ ಕೋಟಿ

ಪಿಟಿಐ
Published 13 ಜನವರಿ 2019, 19:40 IST
Last Updated 13 ಜನವರಿ 2019, 19:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಚೀನಾ ಗಡಿ ಸಮೀಪದಲ್ಲಿ 44 ರಸ್ತೆಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಹಾಗೆಯೇ, ಪಾಕಿಸ್ತಾನಕ್ಕೆ ತಾಗಿಕೊಂಡಿರುವ ರಾಜಸ್ಥಾನ ಮತ್ತು ಪಂಜಾಬ್‌ ರಾಜ್ಯಗಳ ಗಡಿ ಭಾಗದಲ್ಲಿ 2,100 ಕಿ.ಮೀ. ರಸ್ತೆ ನಿರ್ಮಿಸಲು ನಿರ್ಧರಿಸಲಾಗಿದೆ.

ಕೇಂದ್ರ ಲೋಕೋಪಯೋಗಿ ಇಲಾಖೆಯು 2018–19ನೇ ಸಾಲಿನ ವಾರ್ಷಿಕ ವರದಿಯನ್ನು ಪ್ರಕಟಿಸಿದ್ದು ಅದರಲ್ಲಿ ಈ ರಸ್ತೆ ನಿರ್ಮಾಣದ ವಿವರಗಳನ್ನು ಬಹಿರಂಗಪಡಿಸಲಾಗಿದೆ ಸಂಘರ್ಷ ಸೃಷ್ಟಿಯಾದರೆ ತಕ್ಷಣವೇ ಗಡಿ ಭಾಗಕ್ಕೆ ಸೇನೆಯನ್ನು ಕಳುಹಿಸುವುಕ್ಕಾಗಿ ಈ ರಸ್ತೆಗಳನ್ನು ನಿರ್ಮಿಸಬೇಕು ಎಂದು ಕೇಂದ್ರ ಸರ್ಕಾರ ಇಲಾಖೆಗೆ ಸೂಚಿಸಿತ್ತು.

ಭಾರತ–ಚೀನಾ ನಡುವೆ ಸುಮಾರು 4,000 ಕಿ.ಮೀ. ಉದ್ದದ ವಾಸ್ತವ ನಿಯಂತ್ರಣ ರೇಖೆ ಇದೆ. ಇದು ಜಮ್ಮು ಮತ್ತು ಕಾಶ್ಮೀರ, ಸಿಕ್ಕಿಂ, ಹಿಮಾಚಲ ಪ್ರದೇಶ, ಉತ್ತರಾಖಂಡ ಹಾಗೂ ಅರುಣಾಚಲ ಪ್ರದೇಶದಲ್ಲಿ ಹಂಚಿ ಹೋಗಿದೆ.

ADVERTISEMENT

ಭಾರತದ ಗಡಿ ಸಮೀಪದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಚೀನಾ ಆದ್ಯತೆ ನೀಡುತ್ತಿರುವ ಸಂದರ್ಭದಲ್ಲಿಯೇ ಭಾರತ ಈ ರಸ್ತೆಗಳ ನಿರ್ಮಾಣಕ್ಕೆ ಮುಂದಾಗಿದೆ. ದೋಕಲಾ ಪ್ರದೇಶ ದಲ್ಲಿ2017ರಲ್ಲಿ ಭಾರತ ಮತ್ತು ಚೀನಾ ಸೇನೆಗಳು ಮುಖಾಮುಖಿಯಾಗಿದ್ದವು. ಈ ಪ್ರದೇಶದಲ್ಲಿ ಚೀನಾವು ರಸ್ತೆ ನಿರ್ಮಾಣವನ್ನು ತ್ವರಿತಗೊಳಿಸಿದ್ದು ಈ ಮುಖಾಮುಖಿಗೆ ಕಾರಣವಾಗಿತ್ತು. ಎರಡೂ ದೇಶಗಳ ನಡುವೆ ಒಪ್ಪಂದ ನಡೆದು ರಸ್ತೆ ನಿರ್ಮಾಣವನ್ನು ಚೀನಾ ಕೈಬಿಟ್ಟಿತ್ತು. ಭಾರತದ ಸೈನಿಕರು ಹಿಂದಿರುಗಿದ್ದರು.

ಅಂಕಿ ಅಂಶ

* 44 - ಚೀನಾ ಗಡಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಸ್ತೆಗಳು

* ₹21,000 ಕೋಟಿ - ಒಟ್ಟು ವೆಚ್ಚ

*2,100 ಕಿ.ಮೀ - ಪಂಜಾಬ್‌, ರಾಜಸ್ಥಾನಕ್ಕೆ ಹೊಂದಿರುವ ಪಾಕಿಸ್ತಾನ ಗಡಿ ಸಮೀಪ ನಿರ್ಮಿಸಲು ಉದ್ದೇಶಿಸಿರುವ ರಸ್ತೆಯ ಉದ್ದ

* ₹5,400 ಕೋಟಿ - ಒಟ್ಟು ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.