ADVERTISEMENT

ಪ್ರಧಾನಿ ಮೋದಿ ನೇತೃತ್ವದ ಭಾರತ 'ಕೊಡುವ ಸ್ಥಿತಿಯಲ್ಲಿದೆ': ಜೆ.ಪಿ. ನಡ್ಡಾ

ಪಿಟಿಐ
Published 10 ಮೇ 2022, 2:26 IST
Last Updated 10 ಮೇ 2022, 2:26 IST
   

ಅಂಬಾಲ (ಹರಿಯಾಣ): ದೇಶದ ಆರೋಗ್ಯ ವ್ಯವಸ್ಥೆ ಮತ್ತು ಕೋವಿಡ್‌–19 ಲಸಿಕೆ ಅಭಿವೃದ್ಧಿಯನ್ನು ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ.ಪಿ. ನಡ್ಡಾ ಶ್ಲಾಘಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ 'ದೇಶವು ಬದಲಾಗುತ್ತಿದೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

₹ 72 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ 'ಅಟಲ್‌ ಕ್ಯಾನ್ಸರ್‌ ಚಿಕಿತ್ಸೆ ಕೇಂದ್ರ'ವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ನಡ್ಡಾ,ಆರೋಗ್ಯ ಕ್ಷೇತ್ರದಲ್ಲಿ 'ದೊಡ್ಡ ಬದಲಾವಣೆ' ತಂದ ಕೀರ್ತಿಮೋದಿ ಸರ್ಕಾರಕ್ಕೆ ಸಲ್ಲುತ್ತದೆ ಎಂದಿದ್ದಾರೆ.

ಮುಂದುವರಿದು, ಪ್ರಧಾನಿ ಮೋದಿ ಅವರು ದೇಶದ 130 ಕೋಟಿ ಜನರನ್ನು ಕೊರೊನಾವೈರಸ್‌ನಿಂದ ಕಾಪಾಡಿದ್ದಾರೆ ಎಂದಿರುವ ನಡ್ಡಾ,ಸಭಿಕರತ್ತ ಬೊಟ್ಟುಮಾಡಿ, 'ಯಾರೊಬ್ಬರೂ ಮಾಸ್ಕ್ ಧರಿಸಿಲ್ಲ. ಈ 'ಸುರಕ್ಷಾ ಕವಚ' ಕೊಟ್ಟವರು ಯಾರು?' ಎಂದು ಕೇಳಿದ್ದಾರೆ.

ADVERTISEMENT

ಹಿಂದಿನ ಸರ್ಕಾರಗಳ ಅವಧಿಯಲ್ಲಿ ಚಿಕನ್‌ ಗುನ್ಯಾ ಮತ್ತು ಪೋಲಿಯೊದಂತಹ ಖಾಯಿಲೆಗಳಿಗೆ ಲಸಿಕೆ ಅಭಿವೃದ್ಧಿಪಡಿಸಲು ಸಾಕಷ್ಟು ವರ್ಷಗಳೇ ಬೇಕಾಗಿತ್ತು. ಕೋವಿಡ್ ಸಾಂಕ್ರಾಮಿಕ2020ರ ಜನವರಿಯಲ್ಲಿ ಭಾರತದಲ್ಲಿ ಕಾಣಿಸಿಕೊಂಡ ಬಳಿಕ ಮೋದಿ ಸರ್ಕಾರವು ಕಾರ್ಯಪಡೆ ರಚಿಸಿತು. ಕೇವಲ 9 ತಿಂಗಳುಗಳಲ್ಲಿ 2 ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಯಿತುಎಂದು ಹೇಳಿದ್ದಾರೆ.

'ದೇಶ ಬದಲಾಗುತ್ತಿದೆ ಎಂದರೆ ಇದೇ' ಎಂದಿರುವ ಅವರು, ಭಾರತ ಈಗ ಕೊಡುವ ಸ್ಥಿತಿಯಲ್ಲಿದೆ. ಬೇಡುವ ಪರಿಸ್ಥಿತಿಯಲ್ಲಿ ಅಲ್ಲವೆಂದು ಒತ್ತಿ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಮಾಸ್ಕ್‌ ಧರಿಸುವುದನ್ನು ಉಲ್ಲೇಖಿಸಿರುವ ನಡ್ಡಾ,ಅತ್ಯುತ್ತಮ ಆರೋಗ್ಯ ಸೇವೆಗಳನ್ನು ಹೊಂದಿರುವುದರ ಹೊರತಾಗಿಯೂ, ಕೋವಿಡ್ ಸಂದರ್ಭದಲ್ಲಿ ಅಮೆರಿಕ ಅಸಹಾಯಕವಾಗಿ ಸಂಕಷ್ಟ ಎದುರಿಸಿತು ಎಂದು ಹೇಳಿದ್ದಾರೆ.

ಭಾರತ ನಡೆಸಿದ 'ಪ್ರಪಂಚದ ಅತಿದೊಡ್ಡ ಲಸಿಕೆ ಅಭಿಯಾನ'ದಲ್ಲಿ ಈವರೆಗೆ 190 ಕೋಟಿ ಡೋಸ್ ಲಸಿಕೆ ವಿತರಿಸಲಾಗಿದೆ. 18.50 ಕೋಟಿ ಡೋಸ್‌ ಅನ್ನು 100 ದೇಶಗಳಿಗೆ ನೀಡಿದ್ದೇವೆ. ಅದರಲ್ಲಿ 48 ದೇಶಗಳಿಗೆ 1.43 ಕೋಟಿ ಡೋಸ್‌ ಲಸಿಕೆಯನ್ನು ಉಚಿತವಾಗಿಯೇ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

ಹರಿಯಾಣಕ್ಕೆ ಏಮ್ಸ್‌
ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗುವ ಮುನ್ನ ದೇಶದಲ್ಲಿ ಕೇವಲ 2 ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗಳು (ಏಮ್ಸ್‌) ಇದ್ದವು. ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ 6 ಹೊಸ ಏಮ್ಸ್‌ ಸ್ಥಾಪಿಸಿತ್ತು. ಆದರೆ, ನಂತರ 10 ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ನೇತೃತ್ವದ ಯುಪಿಎ ಅವಧಿಯಲ್ಲಿ ಯಾವುದೇ ಹೊಸ ಏಮ್ಸ್‌ ನಿರ್ಮಾಣವಾಗಲಿಲ್ಲ ಎಂದು ಕಿಡಿಕಾರಿದ್ದಾರೆ.

ಮೋದಿ ಅವರುಪ್ರಧಾನಿಯಾದ ಬಳಿಕ 16ಏಮ್ಸ್‌ಗಳನ್ನು ಸ್ಥಾಪಿಸಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯಾಗಿದೆ. ಹರಿಯಾಣಕ್ಕೂ ಏಮ್ಸ್‌ ಬರಲಿದೆ. ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.