ADVERTISEMENT

ಭಾರತ –ಚೀನಾ ಸೇನಾ ಮಾತುಕತೆಯಲ್ಲಿ ಸಿಗದ ಪರಿಹಾರ: ಪರಸ್ಪರ ದೂಷಣೆಯಲ್ಲೇ ಮುಗಿದ ಸಭೆ

ಪಿಟಿಐ
Published 12 ಅಕ್ಟೋಬರ್ 2021, 1:05 IST
Last Updated 12 ಅಕ್ಟೋಬರ್ 2021, 1:05 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಪೂರ್ವ ಲಡಾಖ್‌ನಲ್ಲಿ 17 ತಿಂಗಳಿಂದ ತಲೆದೋರಿರುವ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಭಾನುವಾರನಡೆದ ಭಾರತ–ಚೀನಾ ನಡುವಿನ 13ನೇ ಸುತ್ತಿನ ಸೇನಾ ಮಾತುಕತೆ ವಿಫಲವಾಗಿದೆ. ಪರಸ್ಪರ ದೂಷಣೆಯಲ್ಲಿ ಸಭೆ ಮುಗಿದಿದೆ ಎಂದು ತಿಳಿದುಬಂದಿದೆ.

ಇತ್ತೀಚಿನ ಸೇನಾ ಮಾತುಕತೆಯಲ್ಲಿ ಭಾರತೀಯ ಸೇನೆ ಪ್ರಸ್ತಾಪಿಸಿದ್ದ ರಚನಾತ್ಮಕ ಸಲಹೆಗಳು ಚೀನಾಕ್ಕೆ ಒಪ್ಪಿತವಾಗಿಲ್ಲ ಅಥವಾ ಈ ಸಂಬಂಧ ಯಾವುದೇ ಆಶಾದಾಯಕ ಸೂಚನೆಯನ್ನು ಚೀನಾ ನೀಡಿಲ್ಲ ಎಂದು ಭಾರತ ಸೇನೆ ಹೇಳಿದೆ.

ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಉಂಟಾದ ಪರಿಸ್ಥಿತಿಗೆ ಚೀನಾದ ಏಕಪಕ್ಷೀಯ ಪ್ರಯತ್ನ ಕಾರಣ ಎಂದಿರುವ ಸೇನೆ, ಈ ಪ್ರದೇಶದಲ್ಲಿ ಶಾಂತಿ ಮರುಸ್ಥಾಪಿಸಲು ಚೀನಾ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂದು ಪ್ರಬಲವಾಗಿ ಪ್ರತಿಪಾದಿಸಿದೆ.

ADVERTISEMENT

ಪೂರ್ವ ಲಡಾಖ್‌ನ ಗಡಿ ವಿವಾದಗಳಿಗೆ ಪರಿಹಾರ ಕಂಡುಕೊಳ್ಳಲು ಚೀನಾದ ವರ್ತನೆಯಿಂದಾಗಿ ಸಾಧ್ಯವಾಗಿಲ್ಲ ಎಂದು ಎಂಟೂವರೆ ಗಂಟೆಗಳ ಕಾಲ ನಡೆದ ಮಾತುಕತೆಯ ಕುರಿತು ಸೇನೆ ಹೇಳಿಕೆ ನೀಡಿದೆ.

ಗಸ್ತು ಪಾಯಿಂಟ್ 15ರಲ್ಲಿ (ಪಿಪಿ 15) ಸ್ಥಗಿತಗೊಂಡಿರುವ ಸೇನಾ ವಾಪಸಾತಿ ಹಾಗೂ ಡೆಪ್‌ಸಾಂಗ್ ಪ್ಲೇನ್ಸ್ ಮತ್ತು ಡೆಮ್‌ಚಾಕ್‌ನಲ್ಲಿನ ಸಮಸ್ಯೆಗಳ ಬಗ್ಗೆ ಭಾರತದ ಕಡೆಯವರು ಪ್ರಸ್ತಾಪಿಸಿದ್ದಾರೆ ಎಂದು ತಿಳಿದುಬಂದಿದೆ.

ಪ್ರಾಮಾಣಿಕ ಪ್ರಯತ್ನ: ಚೀನಾ

ಭಾರತವು ಅಸಮಂಜಸ ಮತ್ತು ಅವಾಸ್ತವಿಕ ಬೇಡಿಕೆಗಳನ್ನು ಮುಂದಿರಿಸುತ್ತಿದ್ದು, ಮಾತುಕತೆಯಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂದು ಚೀನಾ ಆರೋಪಿಸಿದೆ. ಗಡಿ ಪರಿಸ್ಥಿತಿಯನ್ನು ತಿಳಿಗೊಳಿಸಲು ತನ್ನ ಕಡೆಯಿಂದ ಪ್ರಾಮಾಣಿಕ ಯತ್ನ ಆಗುತ್ತಿದೆ ಎಂದು ಪ್ರತಿಪಾದಿಸಿದೆ.

ಚೀನಾ ನಿಯೋಗವು ಪೂರ್ವ ನಿರ್ಧರಿತ ಮನಸ್ಥಿತಿಯಲ್ಲಿ ಸಭೆಗೆಬಂದಿತ್ತು. ತನ್ನ ನಿಲುವು ಸಡಿಲಿಸಲು ಅದು ಸಿದ್ಧವಿರಲಿಲ್ಲ ಎಂದು ಮಾತುಕತೆಯನ್ನು ಹತ್ತಿರದಿಂದ ಗಮನಿಸಿದವರು ಮಾಹಿತಿ ನೀಡಿದ್ದಾರೆ. ಪೂರ್ವ ಲಡಾಖ್‌ನಲ್ಲಿ ಚೀನಾ ಬದಿಯ ಚುಶುಲ್-ಮೊಲ್ಡೊ ಗಡಿಕೇಂದ್ರದಲ್ಲಿ ಮಾತುಕತೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.