ನವದೆಹಲಿ: ಭಾರತವು ಚೀನಾದೊಟ್ಟಿಗಿನ ಗಡಿ ವಿವಾದದ ವಿಷಯದಲ್ಲಿ ‘ನ್ಯಾಯಯುತ, ಸಮಂಜಸ ಮತ್ತು ಪರಸ್ಪರ ಸ್ವೀಕಾರಾರ್ಹವಾದ ಪರಿಹಾರಕ್ಕೆ ಬರಲು ಬದ್ಧವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದರು.
ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿಯಾದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ನೀಡಿರುವ ಪ್ರಧಾನಿ, ಸುಮಾರು 10 ತಿಂಗಳ ಹಿಂದೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗಿನ ಮಾತುಕತೆಯ ನಂತರ ಭಾರತ-ಚೀನಾ ಸಂಬಂಧವು ಸ್ಥಿರವಾದ ಪ್ರಗತಿಯನ್ನು ಸಾಧಿಸಿದೆ ಎಂದರು.
ಷಿ ಜಿನ್‌ಪಿಂಗ್ ಅವರೊಟ್ಟಿಗೆ 2024ರ ಅಕ್ಟೋಬರ್‌ನಲ್ಲಿ ರಷ್ಯಾದಲ್ಲಿ ನಡೆಸಿದ್ದ ಮಾತುಕತೆಯನ್ನು ನೆನಪಿಸಿಕೊಂಡ ಅವರು, ‘ಉಭಯ ದೇಶಗಳು ಪರಸ್ಪರರ ಹಿತಾಸಕ್ತಿ ಹಾಗೂ ಸೂಕ್ಷ್ಮತೆಗಳನ್ನು ಗೌರವಿಸುತ್ತಿವೆ. ಇದರಿಂದಾಗಿ ಮಾತುಕತೆಯಲ್ಲಿ ಪ್ರಗತಿ ಸಾಧ್ಯವಾಗಿದೆ’ ಎಂದರು.
‘ಉಭಯ ದೇಶಗಳ ನಡುವಿನ ಸ್ಥಿರ ಮತ್ತು ರಚನಾತ್ಮಕ ಸಂಬಂಧವು ಪ್ರಾದೇಶಿಕ ಮತ್ತು ಜಾಗತಿಕ ಶಾಂತಿಗೆ ಗಣನೀಯ ಕೊಡುಗೆ ನೀಡುತ್ತದೆ. ಚೀನಾದ ತಿಯಾನ್‌ಜಿನ್ ನಗರದಲ್ಲಿ ಆಗಸ್ಟ್ 31 ಹಾಗೂ ಸೆಪ್ಟೆಂಬರ್ 1ರಂದು ನಡೆಯಲಿರುವ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಶೃಂಗಸಭೆ ವೇಳೆ ಚೀನಾದ ಅಧ್ಯಕ್ಷರನ್ನು ಭೇಟಿಯಾಗುವುದನ್ನು ಎದುರು ನೋಡುತ್ತಿದ್ದೇನೆ’ ಎಂದು ಹೇಳಿದರು.
ಗಡಿಯಲ್ಲಿ ಶಾಂತಿ: ‘ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಉದ್ದಕ್ಕೂ ಕಳೆದ ಒಂಬತ್ತು ತಿಂಗಳಿಂದ ಶಾಂತಿ ನೆಲಸಿದೆ. ಈ ಕಾರಣಕ್ಕೆ ಚೀನಾ ಮತ್ತು ಭಾರತ ನಡುವಿನ ಸಂಬಂಧದಲ್ಲಿ ‘ಏರುಗತಿ’ ಕಾಣಬಹುದಾಗಿದೆ’ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಹೇಳಿದರು.
ಗಡಿ ಸಮಸ್ಯೆ ಕುರಿತಂತೆ ವಾಂಗ್ ಯಿ ಅವರೊಂದಿಗೆ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ವಿಶೇಷ ಪ್ರತಿನಿಧಿಗಳ’ ಕಾರ್ಯವಿಧಾನ ಚೌಕಟ್ಟಿನಡಿ ಆಯೋಜಿಸಿದ್ದ ಮಾತುಕತೆಯಲ್ಲಿ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಹಾಗೂ ವಾಂಗ್ ಯಿ ಅವರು ಗಡಿಗೆ ಸಂಬಂಧಿಸಿ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಿದರು.
‘ವಿಶೇಷ ಪ್ರತಿನಿಧಿಗಳ’ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಕಳೆದ ಡಿಸೆಂಬರ್‌ನಲ್ಲಿ ಬೀಜಿಂಗ್‌ಗೆ ಭೇಟಿ ನೀಡಿದ್ದನ್ನು ಪ್ರಸ್ತಾಪಿಸಿದ ಡೊಭಾಲ್,‘ಈ ಭೇಟಿ ವೇಳೆ ನಡೆದ ಮಾತುಕತೆ ನಂತರ, ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ’ ಎಂದರು.
‘ಗಡಿಗಳಲ್ಲಿ ಶಾಂತಿ ನೆಲಸಿದೆ. ಹೀಗಾಗಿ, ದ್ವಿಪಕ್ಷೀಯ ಸಂಬಂಧ ವೃದ್ಧಿ ಕುರಿತಂತೆ ಉಭಯ ದೇಶಗಳ ನಡುವೆ ಗಮನಾರ್ಹ ಮಾತುಕತೆಗಳು ನಡೆಯುತ್ತಿವೆ’ ಎಂದು ಹೇಳಿದರು.
ವಾಂಗ್ ಸಂತಸ: ವಾಂಗ್ ಯಿ ಮಾತನಾಡಿ, ‘ಸಂವಹನ ಹಾಗೂ ಸಹಕಾರದ ಮೂಲಕ ಎರಡೂ ದೇಶಗಳು ವಿಶ್ವಾಸ ವೃದ್ಧಿಗೆ ಒತ್ತು ನೀಡಬೇಕು. ಜೊತೆಗೆ, ಉಭಯ ದೇಶಗಳ ನಡುವಿನ ನಿರ್ದಿಷ್ಟ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು’ ಎಂದರು.
ನೇರ ವಿಮಾನ ಸಂಚಾರ ಶೀಘ್ರ
ಗಡಿಯಲ್ಲಿ ಶಾಂತಿ ಕಾಯ್ದುಕೊಳ್ಳಲು ಜತೆಯಾಗಿ ಕೆಲಸ ಮಾಡುವುದು ಗಡಿ ಮೂಲಕ ವ್ಯಾಪಾರ ಸಂಬಂಧ ಪುನರಾರಂಭಿಸುವುದು ಹೂಡಿಕೆಯನ್ನು ಉತ್ತೇಜಿಸುವುದು ಮತ್ತು ನೇರ ವಿಮಾನ ಸಂಚಾರವನ್ನು ಆದಷ್ಟು ಬೇಗ ಪುನರಾರಂಭಿಸುವುದು ಸೇರಿದಂತೆ ಪರಸ್ಪರ ಸಂಬಂಧ ಬಲಪಡಿಸಲು ಭಾರತ ಮತ್ತು ಚೀನಾ ಮಂಗಳವಾರ ಹಲವಾರು ಕ್ರಮಗಳನ್ನು ಘೋಷಿಸಿವೆ. ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ವಾಂಗ್ ಯಿ ನಡುವಿನ ಮಾತುಕತೆ ವೇಳೆ ಈ ಬಗ್ಗೆ ಚರ್ಚೆ ನಡೆದಿದೆ. ಲಿಪುಲೇಖ್ ಪಾಸ್ ಶಿಪ್ಕಿ ಲಾ ಪಾಸ್ ಮತ್ತು ನಾಥು ಲಾ ಪಾಸ್ ವ್ಯಾಪಾರ ಕೇಂದ್ರಗಳ ಮೂಲಕ ಗಡಿ ವ್ಯಾಪಾರವನ್ನು ಪುನರಾರಂಭಿಸಲು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ ಎಂದು ಜಂಟಿ ಹೇಳಿಕೆ ತಿಳಿಸಿದೆ. ಭಾರತ ಮತ್ತು ಚೀನಾ ‘ರಚನಾತ್ಮಕ ಕ್ರಮಗಳ’ ಮೂಲಕ ಎರಡೂ ದೇಶಗಳ ನಡುವೆ ವ್ಯಾಪಾರ ಮತ್ತು ಹೂಡಿಕೆಯ ಹರಿವನ್ನು ಸುಗಮಗೊಳಿಸಲು ಸಹ ಒಪ್ಪಿಕೊಂಡಿವೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.