
ನವದೆಹಲಿ: ದೇಶದ ರಕ್ಷಣಾ ಪಡೆಗಳ ಯುದ್ಧ ಸನ್ನದ್ಧತೆ ವೃದ್ಧಿಸುವ ನಿಟ್ಟಿನಲ್ಲಿ 114 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವುದಕ್ಕೆ ರಕ್ಷಣಾ ಸಚಿವಾಲಯ ಗುರುವಾರ ಅನುಮೋದನೆ ನೀಡಿದೆ.
ಫ್ರಾನ್ಸ್‌ನ ಡಾಸೊ ಏವಿಯೇಷನ್ ಕಂಪನಿ ತಯಾರಿಸುವ ಈ ಯುದ್ಧ ವಿಮಾನಗಳನ್ನು ಖರೀದಿಸುವ ಪ್ರಸ್ತಾವನೆಗೆ ಬಹಳ ವರ್ಷಗಳಿಂದ ಅನುಮೋದನೆ ಸಿಕ್ಕಿರಲಿಲ್ಲ. ಈಗ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಖರೀದಿ ಪರಿಷತ್ತು(ಡಿಎಸಿ) ಈ ಖರೀದಿಗೆ ಅನುಮೋದನೆ ನೀಡಿದೆ. ಪ್ರಸ್ತಾವಕ್ಕೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಭದ್ರತೆ ಕುರಿತ ಸಂಪುಟ ಸಮಿತಿ (ಸಿಸಿಎಸ್) ಅಂತಿಮ ಮುದ್ರೆ ಒತ್ತುವುದು ಬಾಕಿ ಇದೆ.
ಯುದ್ಧವಿಮಾನಗಳ ಖರೀದಿಗೆ ತಗಲುವ ವೆಚ್ಚದ ಕುರಿತು ರಕ್ಷಣಾ ಸಚಿವಾಲಯ ಮಾಹಿತಿ ನೀಡಿಲ್ಲ. ಆದರೆ, ಇವುಗಳಿಗೆ ತಗಲುವ ವೆಚ್ಚ ₹2.90 ಲಕ್ಷ ಕೋಟಿಯಿಂದ ₹3.15 ಲಕ್ಷ ಕೋಟಿ ಇರಲಿದೆ ಎಂದು ಅಂದಾಜಿಸಲಾಗಿದೆ.
‘ಯುದ್ಧವಿಮಾನಗಳು ಸೇರಿ ಮಿಲಿಟರಿ ಸಾಮಗ್ರಿಗಳ ಖರೀದಿಗಾಗಿ ರಕ್ಷಣಾ ಪಡೆಗಳು ಸಲ್ಲಿಸಿದ್ದ ಪ್ರಸ್ತಾವಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯ ಡಿಎಸಿ ಅನುಮೋದನೆ ನೀಡಿದೆ. ಈ ಮಿಲಿಟರಿ ಸಾಮಗ್ರಿಗಳ ಮೌಲ್ಯ ₹3.60 ಲಕ್ಷ ಕೋಟಿ ಎಂಬುದಾಗಿ ಅಂದಾಜಿಸಲಾಗಿದೆ’ ಎಂದು ಸಚಿವಾಲಯ ಹೇಳಿದೆ.
ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಫೆಬ್ರುವರಿ 17ರಿಂದ 19ರ ವರೆಗೆ ಭಾರತಕ್ಕೆ ಭೇಟಿ ನೀಡಲಿದ್ದು, ಅದಕ್ಕೂ ನಾಲ್ಕು ದಿನ ಮೊದಲು ರಫೇಲ್ ಯುದ್ಧವಿಮಾನಗಳ ಖರೀದಿಗೆ ಡಿಎಸಿ ಅನುಮೋದನೆ ನೀಡಿರುವುದು ಗಮನಾರ್ಹ.
ಈ ಭೇಟಿ ವೇಳೆ ಮ್ಯಾಕ್ರನ್ ಅವರು ನವದೆಹಲಿಯಲ್ಲಿ ನಡೆಯಲಿರುವ ‘ಎ.ಐ ಇಂಪ್ಯಾಕ್ಟ್’ ಶೃಂಗಸಭೆಯಲ್ಲಿ ಪಾಲ್ಗೊಳ್ಳುವರು. ಮುಂಬೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸುವರು.
ಲಾಕ್‌ಹೀಡ್ ಮಾರ್ಟಿನ್ (ಎಫ್–21), ಬೋಯಿಂಗ್ (ಎಫ್/ಎ–18) ಕಂಪನಿಗಳು ತಾವು ತಯಾರಿಸುವ ಯುದ್ಧವಿಮಾನಗಳ ಪೂರೈಕೆಗೆ ಆಸಕ್ತಿ ತೋರಿಸಿದ್ದವು.
ಈ ಯುದ್ಧವಿಮಾನಗಳ ಖರೀದಿಗೆ ರಕ್ಷಣಾ ಸಚಿವಾಲಯವು 13 ವರ್ಷಗಳ ಹಿಂದೆ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿತ್ತು. ಹಲವು ಕಾರಣಗಳಿಂದ ಇದಕ್ಕೆ ಅನುಮೋದನೆ ಸಿಕ್ಕಿರಲಿಲ್ಲ. ಇದು, ಇತ್ತೀಚಿನ ದಿನಗಳಲ್ಲಿ ನಡೆದ ವಿಶ್ವದ ಅತ್ಯಂತ ದೊಡ್ಡ ಪ್ರಮಾಣದ ಮಿಲಿಟರಿ ಸಾಮಗ್ರಿಗಳ ಖರೀದಿ ಕಾರ್ಯಕ್ರಮ ಎಂದೇ ಬಣ್ಣಿಸಲಾಗುತ್ತಿದೆ.
ಭಾರತೀಯ ವಾಯುಪಡೆಯ ಆರು ಸ್ಕ್ಯಾಡ್ರನ್‌ಗಳಿಗೆ ಮಿಗ್ ಯುದ್ಧವಿಮಾನಗಳ ಬದಲು ಮಧ್ಯಮ ಹಾಗೂ ಬಹುಕಾರ್ಯ ಯುದ್ಧವಿಮಾನಗಳನ್ನು (ಎಂಎಂಆರ್‌ಸಿಎ) ಸೇರ್ಪಡೆ ಮಾಡುವುದಕ್ಕೆ 25 ವರ್ಷಗಳ ಹಿಂದೆ ಪ್ರಕ್ರಿಯೆ ಆರಂಭಿಸಲಾಗಿತ್ತು. ರಾಜಕೀಯ ಜಟಾಪಟಿಯಿಂದಾಗಿ ಇದು ಕಾರ್ಯಗತವಾಗಿರಲಿಲ್ಲ.
ಆಗಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ತನ್ನ 10 ವರ್ಷಗಳ ಅಧಿಕಾರಾವಧಿಯಲ್ಲಿ ವಿವಿಧ ಸಾಮರ್ಥ್ಯದ ಯುದ್ಧವಿಮಾನಗಳ ಖರೀದಿಯನ್ನು ಅಂತಿಮಗೊಳಿಸಿರಲಿಲ್ಲ. ಆದರೆ, ಜಾಗತಿಕ ಟೆಂಡರ್ ಮೂಲಕ ರಫೇಲ್ ಯುದ್ಧವಿಮಾನಗಳ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿತ್ತು.
2015ರಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಎಂಎಂಆರ್‌ಸಿಎ ಖರೀದಿಗೆ ಕರೆದಿದ್ದ ಟೆಂಡರ್‌ಅನ್ನು ರದ್ದು ಮಾಡಿತ್ತು. 2016ರಲ್ಲಿ 36 ರಫೇಲ್ ಯುದ್ಧವಿಮಾನಗಳನ್ನು ಖರೀದಿಸಿತ್ತು.
ಪ್ರಮುಖ ಅಂಶಗಳು
ಇದು ಭಾರತ ಮತ್ತು ಫ್ರಾನ್ಸ್ ಸರ್ಕಾರಗಳ ನಡುವಿನ ಖರೀದಿ ಒಪ್ಪಂದವಾಗಿದೆ. ಯುದ್ಧವಿಮಾನಗಳ ದರ ಹಾಗೂ ಇತರ ಶಸ್ತ್ರಾಸ್ತ್ರಗಳ ಕುರಿತು ಡಾಸೊ ಏವಿಯೇಷನ್ ಹಾಗೂ ರಕ್ಷಣಾ ಸಚಿವಾಲಯ ನಡುವೆ ಮಾತುಕತೆ ನಡೆಯಬೇಕಿದೆ. ಹೀಗಾಗಿ ವರ್ಷಾಂತ್ಯಕ್ಕೂ ಮೊದಲು ಒಪ್ಪಂದ ಏರ್ಪಡುವ ಸಾಧ್ಯತೆ ಕಡಿಮೆ
ಈ ಖರೀದಿ ಕಾರ್ಯಕ್ರಮದಡಿ 18 ರಫೇಲ್ ಯುದ್ಧವಿಮಾನಗಳನ್ನು ಡಾಸೊ ಏವಿಯೇಷನ್ ಪೂರೈಕೆ ಮಾಡಲಿದೆ. ಉಳಿದ ಯುದ್ಧವಿಮಾನಗಳನ್ನು ಭಾರತದಲ್ಲಿ ತಯಾರಿಸಲಾಗುತ್ತದೆ
114 ಯುದ್ಧವಿಮಾನಗಳ ಪೈಕಿ 88 ಸಿಂಗಲ್ ಸೀಟರ್ ಹಾಗೂ 26 ಟ್ವಿನ್ ಸೀಟರ್ ಆವೃತ್ತಿಯ ರಫೇಲ್ ಇರಲಿವೆ
ಭಾರತೀಯ ವಾಯುಪಡೆಗೆ ಮಂಜೂರಾದ ಯುದ್ಧವಿಮಾನಗಳ ಸ್ಕ್ಯಾಡ್ರನ್‌ಗಳ ಸಂಖ್ಯೆ 42. ಈಗ ಅವುಗಳ ಸಂಖ್ಯೆ 31ಕ್ಕೆ ಇಳಿದಿದೆ. ಈ ಸಂದರ್ಭದಲ್ಲಿ ರಫೇಲ್ ಖರೀದಿಗೆ ಮುಂದಾಗಿರುವುದು ಗಮನಾರ್ಹ. ಒಂದು ಸ್ಕ್ಯಾಡ್ರನ್ 16–18 ಯುದ್ಧವಿಮಾನಗಳನ್ನು ಒಳಗೊಂಡಿರುತ್ತದೆ
ನೌಕಾಪಡೆಗೆ ಹೆಚ್ಚುವರಿಯಾಗಿ ಬೋಯಿಂಗ್ ಕಂಪನಿಯಿಂದ 6 ಪಿ8ಐ ಯುದ್ಧವಿಮಾನಗಳ ಖರೀದಿಗೆ ಅನುಮೋದನೆ ನೀಡಲಾಗಿದೆ. ಇದಕ್ಕೆ ತಗಲುವ ವೆಚ್ಚ ₹28 ಸಾವಿರ ಕೋಟಿ
₹15 ಸಾವಿರ ಕೋಟಿ ವೆಚ್ಚದಲ್ಲಿ ಎಎಸ್–ಎಚ್‌ಎಪಿಎಸ್ ಖರೀದಿಗೆ ಒಪ್ಪಿಗೆ
‘ರಕ್ಷಣೆ ದಾಳಿ ಸಾಮರ್ಥ್ಯ ಹೆಚ್ಚಳ’
‘ಬಹು ಕಾರ್ಯ ಯುದ್ಧವಿಮಾನ’ವಾದ (ಎಂಆರ್‌ಎಫ್‌ಎ) ರಫೇಲ್ ಜೊತೆಗೆ ಕ್ಷಿಪಣಿ ವ್ಯವಸ್ಥೆಗಳು ಹಾಗೂ ಎಎಸ್–ಎಚ್‌ಎಪಿಎಸ್(ಏರ್–ಶಿಪ್ ಬೇಸ್ಡ್ ಹೈ ಅಲ್ಟಿಟ್ಯೂಡ್ ಸೂಡೊ ಸೆಟಲೈಟ್) ವ್ಯವಸ್ಥೆ ಖರೀದಿಗೆ ಡಿಎಸಿ ಅನುಮೋದಿಸಿದೆ. ಇವುಗಳನ್ನು ಹೊಂದುವುದರಿಂದ ವಾಯುಪ್ರದೇಶ ರಕ್ಷಣೆ ವಿಚಾರದಲ್ಲಿ ಪ್ರಾಬಲ್ಯ ಸಾಧಿಸಲು ವಾಯುಪಡೆಗೆ ಸಾಧ್ಯವಾಗಲಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
‘ಬಹುತೇಕ ರಫೇಲ್ ಯುದ್ಧವಿಮಾನಗಳನ್ನು ಭಾರತದಲ್ಲಿಯೇ ತಯಾರಿಸಲಾಗುತ್ತದೆ. ಕ್ಷಿಪಣಿ ವ್ಯವಸ್ಥೆಗಳು ನೆಲದ ಮುಖಾಂತರ ನಡೆಯುವ ದಾಳಿಯನ್ನು ತಡೆಗಟ್ಟುವಲ್ಲಿನ ಸನ್ನದ್ಧತೆಯನ್ನು ಹೆಚ್ಚಿಸಲಿವೆ. ಈ ಆಯುಧಗಳು ಅತ್ಯಂತ ನಿಖರ ಹಾಗೂ ಆಳವಾಗಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿವೆ’ ಎಂದು ಹೇಳಿದೆ.
‘ಎಎಸ್–ಎಚ್‌ಎಪಿಎಸ್‌ಗಳನ್ನು ಬೇಹುಗಾರಿಕೆ ಕಣ್ಗಾವಲು ಮಿಲಿಟರಿ ಸಂವಹನ ಹಾಗೂ ದೂರಸಂವೇದಿ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದೆ. ಸೇನೆಗೆ ‘ವೈಭವ್’ ಎಂಬ ಟ್ಯಾಂಕ್ ನಿರೋಧಕ ಸಾಧನಗಳನ್ನು ಟಿ–72 ಟ್ಯಾಂಕ್‌ಗಳು ಇನ್‌ಫ್ಯಾಂಟ್ರಿ ಕಂಬ್ಯಾಟ್ ವೆಹಿಕಲ್(ಬಿಎಂಪಿ–2) ಹಾಗೂ ಎಆರ್‌ವಿಯಂತಹ ಅತ್ಯಾಧುನಿಕ ಆಯುಧಗಳನ್ನು ಖರೀದಿಸಲು ಅನುಮೋದನೆ ನೀಡಲಾಗಿದೆ. ಶತ್ರು ಪಾಳಯದ ಟ್ಯಾಂಕ್‌ಗಳು ಮುನ್ನುಗ್ಗುವುದಕ್ಕೆ ಪ್ರತಿರೋಧ ಒಡ್ಡುವುದಕ್ಕೆ ‘ವೈಭವ್’ ಸಾಧನಗಳನ್ನು ಬಳಸಲಾಗುತ್ತದೆ. ಇನ್ನು ಎಆರ್‌ವಿ ಟಿ–72 ಟ್ಯಾಂಕ್ ಹಾಗೂ ಬಿಎಂಪಿ–2 ಶಸ್ತ್ರಾಸ್ತ್ರಗಳು ಸೇನೆಯ ಕಾರ್ಯಾಚರಣೆಗೆ ಬಲ ತುಂಬಲಿವೆ ಎಂದು ಸಚಿವಾಲಯ ತಿಳಿಸಿದೆ.
ಭಾರತೀಯ ನೌಕಾಪಡೆಗೆ ವಿದ್ಯುತ್ ಉತ್ಪಾದನೆಗೆ ನೆರವಾಗಬಲ್ಲ ಎಂಡಬ್ಲು ಮರೀನ್ ಗ್ಯಾಸ್ ಟರ್ಬೈನ್ ಆಧಾರಿತ 4 ಜನರೇಟರ್‌ಗಳು ಪಿ8ಐ ಯುದ್ಧವಿಮಾನ ಖರೀದಿಗೂ ಡಿಎಸಿ ಅನುಮೋದಿಸಿದೆ. ಈ ಜನರೇಟರ್‌ಗಳ ಸೇರ್ಪಡೆಯಿಂದ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾಲಂಬನೆ ಸಾಧ್ಯವಾಗಲಿದ್ದು ವಿದೇಶಿ ತಯಾರಕರ ಮೇಲಿನ ಅವಲಂಬನೆಯೂ ಕಡಿಮೆಯಾಗಲಿದೆ ಎಂದು ಹೇಳಿದೆ. ಕಡಲಗಡಿಯ ನಿರಂತರ ಕಣ್ಗಾವಲು ಜಲಾಂತರ್ಗಾಮಿ ನಿರೋಧಕ ಯುದ್ಧತಂತ್ರದ ವಿಚಾರದಲ್ಲಿ ‘ಪಿ8ಐ’ ಯುದ್ಧವಿಮಾನ ನಿರ್ಣಾಯಕ ಪಾತ್ರ ವಹಿಸಲಿದೆ ಎಂದೂ ಸಚಿವಾಲಯ ತಿಳಿಸಿದೆ.
8 ಡಾರ್ನಿಯರ್ ಖರೀದಿ: ಎಚ್‌ಎಎಲ್ ಜೊತೆ ಒಪ್ಪಂದ
ಭಾರತೀಯ ಕರಾವಳಿ ರಕ್ಷಣಾ ಪಡೆಗೆ(ಐಸಿಜಿ) ₹2300 ಕೋಟಿಗೂ ಅಧಿಕ ವೆಚ್ಚದಲ್ಲಿ 8 ಡಾರ್ನಿಯರ್–228 ಯುದ್ಧವಿಮಾನಗಳನ್ನು ಖರೀದಿಸಲು ಸಾರ್ವಜನಿಕ ವಲಯದ ಪ್ರಮುಖ ಕಂಪನಿ ಹಿಂದೂಸ್ತಾನ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಎಲ್) ಜೊತೆ ರಕ್ಷಣಾ ಸಚಿವಾಲಯ ಗುರುವಾರ ಒಪ್ಫಂದಕ್ಕೆ ಸಹಿ ಹಾಕಿದೆ.
‘ಎಚ್‌ಎಎಲ್‌ನ ಕಾನ್ಪುರ ಘಟಕದ ಸಾರಿಗೆ ವಿಮಾನ ವಿಭಾಗದೊಂದಿಗೆ ಈ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂಧು ಸಚಿವಾಲಯ ತಿಳಿಸಿದೆ. ದೇಶದ ಕರಾವಳಿ ಉದ್ದಕ್ಕೂ ಕಣ್ಗಾವಲು ಹಾಗೂ ರಕ್ಷಣಾ ಕಾರ್ಯಕ್ಕಾಗಿ 35ಕ್ಕೂ ಅಧಿಕ ಡಾರ್ನಿಯರ್ ಯುದ್ಧವಿಮಾನಗಳನ್ನು ಐಸಿಜಿ ನಿಯೋಜಿಸಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.