ADVERTISEMENT

ಕೋವಿಡ್‌ ಲಸಿಕೆ: ದೇಶದಲ್ಲಿ 200 ಕೋಟಿ ಡೋಸ್‌ ಮೈಲುಗಲ್ಲು

ಪಿಟಿಐ
Published 17 ಜುಲೈ 2022, 11:40 IST
Last Updated 17 ಜುಲೈ 2022, 11:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ನವದೆಹಲಿ: ದೇಶದಲ್ಲಿ ಕೋವಿಡ್‌–19ರ ವಿರುದ್ಧದ ಲಸಿಕಾ ಅಭಿಯಾನವು ಭಾನುವಾರ 200 ಕೋಟಿ ಡೋಸ್‌ಗಳ ಮೈಲುಗಲ್ಲನ್ನುದಾಟಿದೆ.

ಈ ಸಾಧನೆಯನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ‘ಇದು ಕೋವಿಡ್‌ ವಿರುದ್ಧದ ಹೋರಾಟಕ್ಕೆ ಬಲ ನೀಡಿದೆ’ ಎಂದಿದ್ದಾರೆ.

‘ಭಾರತವು ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದೆ. ಲಸಿಕಾ ಅಭಿಯಾನವು 200 ಕೋಟಿ ಡೋಸ್‌ಗಳ ಸಂಖ್ಯೆಯನ್ನು ದಾಟಿರುವುದಕ್ಕೆ ಎಲ್ಲಾ ಭಾರತೀಯರಿಗೂ ಅಭಿನಂದನೆಗಳು. ಲಸಿಕಾ ಅಭಿಯಾನವನ್ನು ಸಾಟಿಯಿಲ್ಲದ ವೇಗದಲ್ಲಿ ಕೊಂಡೊಯ್ಯಲು ಕೊಡುಗೆ ನೀಡಿದವರ ಬಗ್ಗೆ ಹೆಮ್ಮೆ ಇದೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ADVERTISEMENT

ದೇಶದಲ್ಲಿ ಶೇ 98ರಷ್ಟು ವಯಸ್ಕರು ಲಸಿಕೆಯ ಕನಿಷ್ಠ ಒಂದು ಡೋಸನ್ನಾದರೂ ಪಡೆದಿದ್ದಾರೆ ಮತ್ತು ಶೇ 90ರಷ್ಟು ಜನರು ಪೂರ್ಣ ಪ್ರಮಾಣದ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ಅಂಕಿ–ಅಂಶಗಳು ತಿಳಿಸಿವೆ.

15ರಿಂದ 18ರೊಳಗಿನ ವಯಸ್ಸಿನವರಲ್ಲಿಶೇ 82ರಷ್ಟು ಮಂದಿ ಲಸಿಕೆಯ ಮೊದಲ ಡೋಸ್‌ ಪಡೆದುಕೊಂಡಿದ್ದಾರೆ. ಶೇ 68ರಷ್ಟು ಮಂದಿ ಎರಡೂ ಡೋಸ್‌ ಪಡೆದುಕೊಂಡಿದ್ದಾರೆ. 12ರಿಂದ 14ರೊಳಗಿನ ವಯಸ್ಸಿವರಲ್ಲಿ ಶೇ 81 ಮಕ್ಕಳು ಮೊದಲ ಡೋಸ್‌ ಹಾಗೂ ಶೇ 56 ರಷ್ಟು ಮಕ್ಕಳು ಎರಡೂ ಡೋಸ್‌ಗಳನ್ನು ಪಡೆದುಕೊಂಡಿದ್ದಾರೆ ಎಂದೂ ಹೇಳಿವೆ.

ದೇಶದ ಗ್ರಾಮೀಣ ಪ್ರದೇಶಗಳ ಲಸಿಕಾ ಕೇಂದ್ರಗಳಲ್ಲಿ ಶೇ 71 ರಷ್ಟು ಹಾಗೂ ನಗರ ಪ್ರದೇಶದಲ್ಲಿ ಶೇ 29ರಷ್ಟು ಲಸಿಕೆ ನೀಡಲಾಗಿದೆ. ಒಟ್ಟು ಡೋಸ್‌ಗಳಲ್ಲಿ ಶೇ 48.9ರಷ್ಟು ಪುರುಷರಿಗೆ, ಶೇ 51.5ರಷ್ಟು ಮಹಿಳೆಯರಿಗೆ ಹಾಗೂ ಶೇ0.02ರಷ್ಟು ಇತರರಿಗೆ ನೀಡಲಾಗಿದೆ ಎಂದೂ ವಿವರಿಸಿದೆ.

ಆಂಧ್ರ ಪ್ರದೇಶ, ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳು, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಲಕ್ಷದ್ವೀಪ, ಛತ್ತೀಸಗಡ, ತೆಲಂಗಾಣ ಮತ್ತು ಗೋವಾಗಳಲ್ಲಿ 12 ವರ್ಷಕ್ಕಿಂತ ಮೇಲ್ಪಟ್ಟ ಅರ್ಹರಿಗೆ ಶೇ 100ರಷ್ಟು ಲಸಿಕೆ ನೀಡಲಾಗಿದೆ.

ಉತ್ತರ ಪ್ರದೇಶ (34.41 ಕೋಟಿ ಡೋಸ್‌), ಮಹಾರಾಷ್ಟ್ರ (17.05 ಕೋಟಿ ಡೋಸ್‌), ಪಶ್ಚಿಮ ಬಂಗಾಳ (14.40 ಕೋಟಿ ಡೋಸ್‌), ಬಿಹಾರ (13.98 ಕೋಟಿ ಡೊಸ್‌) ಮತ್ತು ಮಧ್ಯಪ್ರದೇಶ (12.13ಕೋಟಿ ಡೋಸ್‌) ಹೆಚ್ಚಿನ ಸಂಖ್ಯೆಯ ಡೋಸ್‌ಗಳನ್ನು ನೀಡಿರುವ ಐದು ರಾಜ್ಯಗಳಾಗಿವೆ. ದೇಶದಲ್ಲಿ ಇದುವರೆಗೆ 5.63 ಕೋಟಿ ಬೂಸ್ಟರ್‌ ಡೋಸ್‌ಗಳನ್ನು ನೀಡಲಾಗಿದೆ.

ಲಸಿಕಾ ಅಭಿಯಾನದಲ್ಲಿ ಭಾರತದ ಸಾಧನೆಗೆ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಆಗ್ನೇಯ ಏಷ್ಯಾದ ಪ್ರಾದೇಶಿಕ ನಿರ್ದೇಶಕಿ ಡಾ.ಪೂನಂ ಖೇತ್ರಪಾಲ್‌ ಅಭಿನಂದನೆ ಸಲ್ಲಿಸಿದ್ದಾರೆ.

‘ಕೋವಿಡ್‌ ಸಾಂಕ್ರಾಮಿಕದ ಪರಿಣಾಮವನ್ನು ತಗ್ಗಿಸುವ ನಿಟ್ಟಿನಲ್ಲಿ ಭಾರತದ ಬದ್ಧತೆ ಮತ್ತು ಪ್ರಯತ್ನಗಳಿಗೆ ಇದು ಸಾಕ್ಷಿ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.