ಮುಂಬೈ: ಆಮದು ಪ್ರಮಾಣವನ್ನು ಕಡಿಮೆಗೊಳಿಸಿ, ರಪ್ತು ಮಾಡುವುದನ್ನು ಜಾಸ್ತಿ ಮಾಡುವುದು ರಾಷ್ಟ್ರೀಯತೆಯ ಅತ್ಯಂತ ಮಹತ್ವದ ರೂಪ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮಂಗಳವಾರ ಅಭಿಪ್ರಾಯಪಟ್ಟಿದ್ದಾರೆ.
ದೇಶವು ಜ್ಞಾನ ಮತ್ತು ಸಂಶೋಧನೆಯಲ್ಲಿ ಮುಂದುವರೆಯುವ ಮೂಲಕ ‘ವಿಶ್ವಗುರು’ವಾಗಿದೆ. ಪ್ರಧಾನಿ ಮೋದಿ ಅವರು ಭಾರತವನ್ನು ಐದು ಟ್ರಿಲಿಯನ್ ಡಾಲರ್ ಅರ್ಥಿಕತೆ ಹೊಂದಿದ ದೇಶವನ್ನಾಗಿಸುವ ಗುರಿಯಿಟ್ಟುಕೊಂಡಿದ್ದಾರೆ. ನಾವು ಶಿಕ್ಷಣ ಹಾಗೂ ನಾವಿನ್ಯತೆಯನ್ನು ಬಳಸಿಕೊಂಡು ದೇಶದ ಅಭಿವೃದ್ದಿಯನ್ನು ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
‘ಜಗತ್ತಿನ ಪ್ರತಿಯೊಂದು ಅಭಿವೃದ್ದಿ ಹೊಂದಿದ ದೇಶವು ಕೂಡ ಜ್ಞಾನ ಮತ್ತು ಸಂಶೋಧನೆಯ ಮೂಲಕ ಬೆಳವಣಿಗೆ ಕಂಡಿದೆ. ಭಾರತದಲ್ಲೂ ರಕ್ಷಣೆ, ಕೃಷಿ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಸಂಶೋಧನೆಗಳು ನಡೆಯುತ್ತಿವೆ. ಜಗತ್ತು ಭಾರತದ ಪರಂಪರೆ, ಇತಿಹಾಸ, ಸಂಸ್ಕೃತಿ ಹಾಗೂ ಯೋಗದ ಕಡೆ ಆಸಕ್ತಿ ತೋರಿಸುತ್ತಿದೆ’ ಎಂದು ಹೇಳಿದ್ದಾರೆ.
ಎಲ್ಲಾ ಕ್ಷೇತ್ರಗಳಲ್ಲೂ ತಂತ್ರಜ್ಞಾನ ಮಹತ್ವದ ಪಾತ್ರವಹಿಸುತ್ತಿದೆ. ಯುದ್ದಗಳಲ್ಲಿ ಕೂಡ ಸೈನಿಕರು ಮತ್ತು ಟ್ಯಾಂಕರ್‌ಗಳ ಜಾಗದಲ್ಲಿ ಡ್ರೋನ್ ಮತ್ತು ಕ್ಷಿಪಣಿಗಳನ್ನು ಬಳಸಲಾಗುತ್ತಿದೆ. ಯುವ ಜನರು ದೇಶದ ಅಭಿವೃದ್ದಿಗೆ ಕಾರಣವಾಗುವ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.