ADVERTISEMENT

ಗಡಿಯಾಚೆಗಿನ ಭಯೋತ್ಪಾದನೆಗೆ ಪಾಕ್‌ ಪ್ರಾಯೋಜಕತ್ವ: ಭಾರತ

ಪಿಟಿಐ
Published 25 ಆಗಸ್ಟ್ 2020, 11:38 IST
Last Updated 25 ಆಗಸ್ಟ್ 2020, 11:38 IST
   

ವಿಶ್ವಸಂಸ್ಥೆ:ಗಡಿಯಾಚೆಗಿನ ಭಯೋತ್ಪಾದನೆಯ ಅತಿ ದೊಡ್ಡ ಪ್ರಾಯೋಜಕತ್ವವನ್ನು ಪಾಕಿಸ್ತಾನವೇ ವಹಿಸಿಕೊಂಡಿದೆ ಎಂದು ಭಾರತ ಮತ್ತೊಮ್ಮೆ ಕಟುವಾಗಿ ಟೀಕಿಸಿದೆ.

‘ಸುಳ್ಳನ್ನು ನೂರು ಬಾರಿ ಹೇಳಿದರೂ ಅದು ಎಂದಿಗೂ ಸತ್ಯವಾಗುವುದಿಲ್ಲ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನ, ಈಗ ಭಯೋತ್ಪಾದನೆಯಿಂದಲೇ ಸಂಕಷ್ಟಕ್ಕೆ ಸಿಲುಕಿರುವುದಾಗಿ ನಾಟಕವಾಡುತ್ತಿದೆ’ ಎಂದು ತರಾಟೆಗೆ ತೆಗೆದುಕೊಂಡಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ‘ಅಂತರರಾಷ್ಟ್ರೀಯ ಭದ್ರತೆ ಮತ್ತು ಶಾಂತಿ’ ಕುರಿತು ನಡೆದ ಚರ್ಚೆಯಲ್ಲಿ ಪಾಕಿಸ್ತಾನದ ರಾಯಭಾರಿ ಮುನಿರ್‌ ಅಕ್ರಮ ಭಯೋತ್ಪಾದನೆ ಕುರಿತು ಹೇಳಿಕೆ ನೀಡಿದ್ದಾರೆ. ಭಯೋತ್ಪಾದನೆಯಿಂದ ಎದುರಾದ ಸಂಕಷ್ಟಗಳನ್ನು ವಿವರಿಸಿದ್ದಾರೆ ಎಂದು ಪಾಕಿಸ್ತಾನದ ರಾಯಭಾರ ಕಚೇರಿ ಹೇಳಿಕೆ ನೀಡಿತ್ತು. ಆದರೆ, 15 ಸದಸ್ಯ ರಾಷ್ಟ್ರಗಳ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಸದಸ್ಯವಲ್ಲದ ರಾಷ್ಟ್ರಗಳಿಗೆ ಅವಕಾಶವಿರಲಿಲ್ಲ. ಪಾಕಿಸ್ತಾನ ಸದಸ್ಯ ರಾಷ್ಟ್ರವಲ್ಲದಿದ್ದರೂ ಸುಳ್ಳು ಹೇಳಿಕೆ ನೀಡಿತ್ತು.

ADVERTISEMENT

ಈ ಬಗ್ಗೆ ಟ್ವಿಟರ್‌ ಮೂಲಕ ಕಟುವಾಗಿ ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆಯ ಭಾರತೀಯ ರಾಯಭಾರಿ ಕಚೇರಿ, ‘ಭದ್ರತಾ ಮಂಡಳಿಯ ಸದಸ್ಯರಲ್ಲದವರಿಗೆ ಸಭೆಯಲ್ಲಿ ಅವಕಾಶವೇ ಇರಲಿಲ್ಲ. ಆದರೂ ಪಾಕಿಸ್ತಾನದ ಪ್ರತಿನಿಧಿ ಹೇಳಿಕೆ ನೀಡಿದ್ದಾರೆ ಎನ್ನುವುದು ಅಚ್ಚರಿ ಮೂಡಿಸಿದೆ. ಪಾಕಿಸ್ತಾನ ಮತ್ತೊಮ್ಮೆ ಸುಳ್ಳು ಹೇಳಿರುವುದು ಬಯಲಾಗಿದೆ’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.