ADVERTISEMENT

ಕೋವಿಡ್ 3ನೇ ಅಲೆ ವಿರುದ್ಧ ಭಾರಿ ಯಶಸ್ಸಿನೊಂದಿಗೆ ಹೋರಾಟ: ಪ್ರಧಾನಿ ಮೋದಿ

ಪಿಟಿಐ
Published 30 ಜನವರಿ 2022, 12:16 IST
Last Updated 30 ಜನವರಿ 2022, 12:16 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಕೋವಿಡ್ ಮೂರನೇ ಅಲೆ ವಿರುದ್ಧ ದೇಶವು ಭಾರಿ ಯಶಸ್ಸಿನೊಂದಿಗೆ ಹೋರಾಟ ನಡೆಸುತ್ತಿದೆ. ದೇಶಿ ನಿರ್ಮಿತ ಕೋವಿಡ್ ಲಸಿಕೆ ನಮ್ಮ ಶಕ್ತಿಯಾಗಿದೆ ಎಂದು ವರ್ಷದ ಮೊದಲ 'ಮನ್ ಕಿ ಬಾತ್‌'ನಲ್ಲಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಗಣನೀಯವಾಗಿ ಕುಸಿಯುತ್ತಿದ್ದು, ಉತ್ತಮ ಸಂಕೇತವಾಗಿದೆ ಎಂದು ಹೇಳಿದರು.

'ಸುಮಾರು ನಾಲ್ಕೂವರೆ ಕೋಟಿ ಮಕ್ಕಳಿಗೆ ಮೊದಲ ಡೋಸ್ ಕೋವಿಡ್ ಲಸಿಕೆ ನೀಡಲಾಗಿದ್ದು, ಹೆಮ್ಮೆಪಡುವ ವಿಷಯವಾಗಿದೆ. ಮೂರರಿಂದ ನಾಲ್ಕು ವಾರಗಳ ಅವಧಿಯಲ್ಲಿ 15ರಿಂದ 18 ವರ್ಷದೊಳಗಿನ ಸುಮಾರು ಶೇ 60ರಷ್ಟು ಮಕ್ಕಳು ಕೋವಿಡ್ ಲಸಿಕೆ ಪಡೆದಿದ್ದಾರೆ. ಇದರಿಂದ ಯುವ ಜನಾಂಗಕ್ಕೆ ಕೋವಿಡ್‌ನಿಂದ ರಕ್ಷಣೆ ಸಿಗುವುದಲ್ಲದೆ, ಕಲಿಕೆ ಮುಂದುವರಿಸಲು ನೆರವಾಗಲಿದೆ' ಎಂದು ತಿಳಿಸಿದ್ದಾರೆ.

'ಇನ್ನೊಂದು ಒಳ್ಳೆಯ ಅಂಶ ಏನೆಂದರೆ 20 ದಿನಗಳಲ್ಲಿ ಒಂದು ಕೋಟಿ ಮಂದಿ ಮುನ್ನೆಚ್ಚರಿಕೆ ಡೋಸ್ ಕೋವಿಡ್ ಲಸಿಕೆ ಪಡೆದಿದ್ದಾರೆ' ಎಂದು ಪ್ರಧಾನಿ ಮೋದಿ ತಿಳಿಸಿದರು.

'ದೇಶಿ ಲಸಿಕೆಗಳ ಮೇಲೆ ಜನರ ನಂಬಿಕೆಯು ನಮ್ಮ ಅತಿ ದೊಡ್ಡ ಶಕ್ತಿಯಾಗಿದೆ. ಈ ಮೂಲಕ ದೇಶವು ಭಾರಿ ಯಶಸ್ಸಿನೊಂದಿಗೆ ಕೋವಿಡ್ ವಿರುದ್ಧ ಹೋರಾಟ ನಡೆಸುತ್ತಿದೆ' ಎಂದು ಹೇಳಿದರು.

'ಜನರು ಸುರಕ್ಷಿತರಾಗಿರಬೇಕು, ದೇಶದ ಆರ್ಥಿಕ ಚಟುವಟಿಕೆಯು ಆವೇಗವನ್ನು ಕಾಪಾಡಿಕೊಳ್ಳಬೇಕು. ಇದು ದೇಶದ ಪ್ರತಿಯೊಬ್ಬ ನಾಗರಿಕನ ಆಶಯವಾಗಿದೆ' ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.

ಶೇ 75ರಷ್ಟು ವಯಸ್ಕರು ಕೋವಿಡ್ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿರುವುದಕ್ಕಾಗಿ ದೇಶದ ಜನತೆಯನ್ನು ಪ್ರಧಾನಿ ಮೋದಿ ಅಭಿನಂದಿಸಿದರು. ಇದು ಕೋವಿಡ್ ಲಸಿಕೆ ಅಭಿಯಾನವನ್ನು ಯಶಸ್ವಿಗೊಳಿಸುತ್ತಿರುವ ಪ್ರತಿಯೊಬ್ಬರಿಗೂ ಹೆಮ್ಮೆಯ ವಿಚಾರಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.