ADVERTISEMENT

ಪ್ರಧಾನಿ ಮೋದಿ ಉಜ್ವಲ ಯೋಜನೆಯ ಮೊದಲ ಫಲಾನುಭವಿ ಮಹಿಳೆಗೆ ಈಗಲೂ ಬೆರಣಿಯೇ ಇಂಧನ!

ಜಾಹೀರಾತು ಪೋಸ್ಟರ್‌ನಲ್ಲಿರುವ ಮಹಿಳೆಗೇ ಸಿಲಿಂಡರ್ ಇಲ್ಲ

​ಪ್ರಜಾವಾಣಿ ವಾರ್ತೆ
Published 8 ಮೇ 2019, 8:35 IST
Last Updated 8 ಮೇ 2019, 8:35 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಬೆಂಗಳೂರು:‘ಉಚಿತವಾಗಿ ಎಲ್‌ಪಿಜಿ ಸಂಪರ್ಕ ನೀಡಿದ್ದಾರೆ. ಆದರೆ ಪ್ರತಿ ಬಾರಿ ಸಿಲಿಂಡರ್‌ ಕೊಳ್ಳಲು ಹಣ ಎಲ್ಲಿಂದ ಹೊಂದಿಸಲಿ? ಹೀಗಾಗಿ ಈಗಲೂ ಬೆರಣಿಯನ್ನೇ ಇಂಧನವಾಗಿ ಬಳಸುತ್ತಿದ್ದೇನೆ’. ಇದು ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಉಜ್ವಲ ಯೋಜನೆ ಅಡಿ ಮೊತ್ತಮೊದಲ ಎಲ್‌ಪಿಜಿ ಸಂಪರ್ಕ ಪಡೆದ ಮಹಿಳೆ ಗುಡ್ಡಿ ದೇವಿ ಮಾತು.

ಗ್ರಾಮೀಣ ಕುಟುಂಬದ ಮಹಿಳೆಯರಿಗೆ ನೆರವಾಗುವ ಸಲುವಾಗಿ 2016ರಲ್ಲಿ ಕೇಂದ್ರ ಸರ್ಕಾರ ಆರಂಭಿಸಿರುವ ಉಜ್ವಲ ಯೋಜನೆಯ ಕೆಲವು ಜಾಹೀರಾತು ಪೋಸ್ಟರ್‌ಗಳಲ್ಲಿಯೂ ಗುಡ್ಡಿ ದೇವಿ ಫೋಟೊ ಬಳಸಲಾಗಿದೆ. ಆದರೆ, ಯೋಜನೆಯ ಬಹುತೇಕ ಫಲಾನುಭವಿಗಳು ಆರ್ಥಿಕ ಮುಗ್ಗಟ್ಟಿನಿಂದಾಗಿ ಎಲ್‌ಪಿಜಿ ಸಿಲಿಂಡರ್ ಖರೀದಿಸುತ್ತಿಲ್ಲ ಎನ್ನಲಾಗಿದೆ. ಈ ಕುರಿತು ವರದಿ ಮಾಡಿರುವ ಬಿಬಿಸಿ ನ್ಯೂಸ್, ಗುಡ್ಡಿ ದೇವಿ ಅವರ ಸಂದರ್ಶನದ ವಿಡಿಯೊವೊಂದನ್ನೂ ಪ್ರಸಾರ ಮಾಡಿದೆ.

‘ಸಗಣಿ ಸಂಗ್ರಹಿಸಿ ಬೆರಣಿ ತಟ್ಟುವುದು ಕಷ್ಟದ ಕೆಲಸ. ಬೆರಣಿ ಉರಿಸುವುದರಿಂದ ಹೊಗೆ ಆವರಿಸಿ ಕಣ್ಣೀರು ಬರುತ್ತದೆ. ಆದರೆಸಿಲಿಂಡರ್‌ ಕೊಳ್ಳಲು ಹಣ ಎಲ್ಲಿಂದ ಹೊಂದಿಸಲಿ. ನನಗೆ ಎಲ್‌ಪಿಜಿ ಸಂಪರ್ಕ ದೊರೆತಾಗ ಒಂದು ಸಿಲಿಂಡರ್ ದರ ₹520 ಇತ್ತು. ಈಗ ₹770 ಆಗಿದೆ’ ಎನ್ನುತ್ತಾರೆ ಗುಡ್ಡಿ. ಉಜ್ವಲ ಯೋಜನೆಯ ಫಲಾನುಭವಿಗಳು ವರ್ಷಕ್ಕೆ 12 ಸಬ್ಸಿಡಿ ಸಹಿತ ಸಿಲಿಂಡರ್‌ಗಳನ್ನು ಖರೀದಿಸಲು ಅವಕಾಶವಿದೆ. ಆದರೆ, ಮೂರು ವರ್ಷಗಳಲ್ಲಿ 11 ಸಿಲಿಂಡರ್ ಖರೀದಿಸಲು ದುಡ್ಡು ಹೊಂದಿಸುವುದಷ್ಟೇ ತನ್ನಿಂದ ಸಾಧ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

’ಉಜ್ವಲ ಯೋಜನೆಯಡಿ ಎಲ್‌ಪಿಜಿ ಸಂಪರ್ಕ ಪಡೆದವರ ಪೈಕಿ ಶೇ 30ರಷ್ಟು ಮಂದಿ ಮಾತ್ರ ನಮ್ಮ ಬಳಿ ಸಿಲಿಂಡರ್ ಖರೀದಿಗೆ ಬರುತ್ತಾರೆ’ ಎಂಬ ಅಧಿಕಾರಿಯೊಬ್ಬರ ಹೇಳಿಕೆಯನ್ನೂಬಿಬಿಸಿ ನ್ಯೂಸ್ವಿಡಿಯೊ ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.