ADVERTISEMENT

7 ತಿಂಗಳಲ್ಲಿ 33,000 ಟನ್‌ ಕೋವಿಡ್‌ ತ್ಯಾಜ್ಯ ಉತ್ಪಾದನೆ: ಮಹಾರಾಷ್ಟ್ರದಲ್ಲೇ ಅಧಿಕ

ಪಿಟಿಐ
Published 10 ಜನವರಿ 2021, 8:31 IST
Last Updated 10 ಜನವರಿ 2021, 8:31 IST
ಕೊಚ್ಚಿಯ ಅಸ್ಪತ್ರೆಯೊಂದರಲ್ಲಿ ಕೋವಿಡ್‌ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಿರುವ ಆರೋಗ್ಯ ಕಾರ್ಯಕರ್ತರು. ಪಿಟಿಐ ಚಿತ್ರ
ಕೊಚ್ಚಿಯ ಅಸ್ಪತ್ರೆಯೊಂದರಲ್ಲಿ ಕೋವಿಡ್‌ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಿರುವ ಆರೋಗ್ಯ ಕಾರ್ಯಕರ್ತರು. ಪಿಟಿಐ ಚಿತ್ರ    

ನವದೆಹಲಿ: ಕೋವಿಡ್‌–19 ಪಿಡುಗು ಆರಂಭಗೊಂಡ ನಂತರದ 7 ತಿಂಗಳ ಅವಧಿಯಲ್ಲಿ ಭಾರತದಲ್ಲಿ 33,000 ಟನ್‌ಜೈವಿಕ–ವೈದ್ಯಕೀಯ ತ್ಯಾಜ್ಯ ಉತ್ಪತ್ತಿಯಾಗಿದೆ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಹೇಳಿದೆ.

ಈ ಪೈಕಿ ಗರಿಷ್ಠ ಪ್ರಮಾಣದ 3,587 ಟನ್‌ ತ್ಯಾಜ್ಯ ಮಹಾರಾಷ್ಟ್ರದಲ್ಲಿ ಉತ್ಪತ್ತಿಯಾಗಿದೆ. ಇನ್ನು, ಅಕ್ಟೋಬರ್‌ ತಿಂಗಳಲ್ಲಿ ದೇಶದಲ್ಲಿಯೇ ಗರಿಷ್ಠ ಪ್ರಮಾಣದ ತ್ಯಾಜ್ಯ ಉತ್ಪತ್ತಿಯಾಗಿದೆ. ಈ ಪ್ರಮಾಣ 5,500 ಟನ್‌ ಎಂದು ಮಂಡಳಿಯ ಅಂಕಿ–ಅಂಶಗಳು ತಿಳಿಸುತ್ತವೆ.

ಜೂನ್‌ನಿಂದ ಡಿಸೆಂಬರ್‌ ವರೆಗಿನ ಅವಧಿಯಲ್ಲಿ ದೇಶದಲ್ಲಿ ಉತ್ಪತ್ತಿಯಾದ, ಕೋವಿಡ್‌–19ಗೆ ಸಂಬಂಧಿಸಿದ ತ್ಯಾಜ್ಯವನ್ನು 198 ‘ಸಾರ್ವಜನಿಕ ಜೈವಿಕ–ವೈದ್ಯಕೀಯ ತ್ಯಾಜ್ಯ ವಿಲೇವಾರಿ ಕೇಂದ್ರ’ಗಳ ಮೂಲಕ ವಿಲೇವಾರಿ ಮಾಡಲಾಗಿದೆ.

ADVERTISEMENT

ಪಿಪಿಇ ಕಿಟ್‌ಗಳು, ಮಾಸ್ಕ್‌, ಶೂ ಕವರ್‌ಗಳು, ಕೈಗವುಸು, ರಕ್ತಸಿಕ್ತ ವೈದ್ಯಕೀಯ ಉಪಕರಣಗಳು, ಡ್ರೆಸ್ಸಿಂಗ್, ಪ್ಲಾಸ್ಟರ್‌ಗೆ ಬಳಸಿದ ವಸ್ತುಗಳು, ಕಾಟನ್‌ ಸ್ವ್ಯಾಬ್ಸ್‌, ದೇಹದಿಂದ ಸ್ರವಿಸಿದ ದ್ರವಗಳು, ರಕ್ತದ ಕಲೆಗಳಿಂದ ಮಲಿನಗೊಂಡ ಹಾಸಿಗೆಗಳು, ಸಿರಿಂಜ್‌ಗಳು ಜೈವಿಕ–ವೈದ್ಯಕೀಯ ತ್ಯಾಜ್ಯಗಳಾಗಿವೆ.

ರಾಜ್ಯಗಳಲ್ಲಿ ಎಷ್ಟು ಪ್ರಮಾಣದ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಅದನ್ನು ಯಾವ ರೀತಿ ಸಂಗ್ರಹಿಸಿ, ವಿಘಟಿಸಿ ವಿಲೇವಾರಿ ಮಾಡಲಾಗುತ್ತದೆ ಎಂಬುದರ ಮೇಲೆ ನಿಗಾ ಇಡಲು ‘ಕೋವಿಡ್‌19ಬಿಡಬ್ಲ್ಯುಎಂ’ ಎಂಬ ಆ್ಯಪ್‌ ಅನ್ನು ಸಹ ಮಂಡಳಿ ಅಭಿವೃದ್ಧಿಪಡಿಸಿದೆ. ನಿಯಮಿತವಾಗಿ ತ್ಯಾಜ್ಯ ಸಂಗ್ರಹಿಸಿ, ವಿಲೇವಾರಿ ಮಾಡಲು ಈ ಆ್ಯಪ್‌ ನೆರವಾಗಿದೆ ಎಂದು ಮಂಡಳಿ ಮೂಲಗಳು ಹೇಳಿವೆ.

ಜೈವಿಕ–ವೈದ್ಯಕೀಯ ತ್ಯಾಜ್ಯ ಸಂಗ್ರಹಿಸಿ, ವಿಲೇವಾರಿ ಮಾಡುವ ಪ್ರಕ್ರಿಯೆಯ ಮೇಲ್ವಿಚಾರಣೆಗಾಗಿ ಮೊಬೈಲ್‌ ಆ್ಯಪ್‌ ಬಳಕೆ ಮಾಡುವುದನ್ನು ಕಡ್ಡಾಯಗೊಳಿಸಿ ಕಳೆದ ವರ್ಷ ಜುಲೈನಲ್ಲಿ ಸುಪ್ರೀಂಕೋರ್ಟ್‌ ಆದೇಶಿಸಿತ್ತು.

ಅಂಕಿ–ಅಂಶ

ರಾಜ್ಯ: ಉತ್ಪತ್ತಿಯಾದ ತ್ಯಾಜ್ಯ (ಟನ್‌ಗಳಲ್ಲಿ)

ಮಹಾರಾಷ್ಟ್ರ-5,367

ಕೇರಳ-3,300

ಗುಜರಾತ್-3,086

ತಮಿಳುನಾಡು-2,086

ಉತ್ತರ ಪ್ರದೇಶ-2,502

ದೆಹಲಿ-2,471

ಪಶ್ಚಿಮ ಬಂಗಾಳ-2,095

ಕರ್ನಾಟಕ-2,026

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.