ADVERTISEMENT

ಪಿಎಂ ಗತಿಶಕ್ತಿ ಯೋಜನೆಯಿಂದ ವೆಚ್ಚದಲ್ಲಿ ಗಣನೀಯ ಇಳಿಕೆ: ಮೋದಿ

ವಿಶಾಖಪಟ್ಟಣ: ವಿವಿಧ ಮೂಲಸೌಕರ್ಯಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ

ಪಿಟಿಐ
Published 12 ನವೆಂಬರ್ 2022, 11:20 IST
Last Updated 12 ನವೆಂಬರ್ 2022, 11:20 IST
ವಿಶಾಖಪಟ್ಟಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಮೂಲಸೌಕರ್ಯಗಳಿಗೆ ಚಾಲನೆ ನೀಡಿದರು. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಆಂಧ್ರಪ್ರದೇಶ ರಾಜ್ಯಪಾಲ ವಿಶ್ವಭೂಷಣ್ ಹರಿಚಂದನ್, ಮುಖ್ಯಮಂತ್ರಿ ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ ಇದ್ದರು –ಪಿಟಿಐ ಚಿತ್ರ
ವಿಶಾಖಪಟ್ಟಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಮೂಲಸೌಕರ್ಯಗಳಿಗೆ ಚಾಲನೆ ನೀಡಿದರು. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಆಂಧ್ರಪ್ರದೇಶ ರಾಜ್ಯಪಾಲ ವಿಶ್ವಭೂಷಣ್ ಹರಿಚಂದನ್, ಮುಖ್ಯಮಂತ್ರಿ ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ ಇದ್ದರು –ಪಿಟಿಐ ಚಿತ್ರ   

ವಿಶಾಖಪಟ್ಟಣ: ‘ಪಿಎಂ ಗತಿಶಕ್ತಿ ಯೋಜನೆ ಅನುಷ್ಠಾನದಿಂದಾಗಿ ದೇಶದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ವೇಗ ದೊರೆತಿರುವುದು ಮಾತ್ರವಲ್ಲ, ಯೋಜನಾ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಲು ಈ ಯೋಜನೆ ಸಹಕಾರಿಯಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಇಲ್ಲಿ ಹೇಳಿದರು.

ಆಂಧ್ರ ಪ್ರದೇಶದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಸಂಬಂಧಿಸಿದ ₹ 15,233 ಕೋಟಿ ಮೊತ್ತದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ನಂತರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಪಿಎಂ ಗತಿಶಕ್ತಿ ಯೋಜನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ವಿದೇಶಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸುತ್ತಿದ್ದು, ‌ಭಾರತವು ಈಗ ವಿಶ್ವದ ಗಮನವನ್ನೇ ಸೆಳೆಯುತ್ತಿದೆ’ ಎಂದರು.

ADVERTISEMENT

‘ಸರಕುಗಳ ಸಾಗಣೆ ಕ್ಷೇತ್ರವು ಬಹು ವಿಧದ ಸಾರಿಗೆ ವ್ಯವಸ್ಥೆಯ ಮೇಲೆ ಅವಲಂಬಿಸಿದೆ. ಹೀಗಾಗಿ, ಬಹು ವಿಧದ ಸಾರಿಗೆ ವ್ಯವಸ್ಥೆ ಎಂಬುದು ಬರುವ ದಿನಗಳಲ್ಲಿ ನಮ್ಮ ನಗರಗಳ ಭವಿಷ್ಯವೇ ಆಗಿದೆ’ ಎಂದು ಮೋದಿ ಹೇಳಿದರು.

ಆಂಧ್ರ ಜನರನ್ನು ಹೊಗಳಿದ ಮೋದಿ: ಪ್ರಧಾನಿ ಮೋದಿ ಅವರು, ಆಂಧ್ರಪ್ರದೇಶ ಜನರನ್ನು ‘ಸ್ನೇಹಪರರು ಹಾಗೂ ಉದ್ಯಮಶೀಲರು’ ಎಂದು ಹೊಗಳಿದರು.

‘ಶಿಕ್ಷಣ, ಉದ್ಯಮ ಹಾಗೂ ತಂತ್ರಜ್ಞಾನ ಅಥವಾ ವೈದ್ಯಕೀಯ ವೃತ್ತಿಯಾಗಿರಲಿ ಆಂಂಧ್ರಪ್ರದೇಶದ ಜನರಿಗೆ ವಿಶ್ವದಾದ್ಯಂತ ವಿಶಿಷ್ಟ ಮನ್ನಣೆ ಇದೆ. ಇವರಿಗೆ ಇಂಥ ಮನ್ನಣೆ ಸಿಗಲು ವೃತ್ತಿಪರತೆ ಮಾತ್ರವಲ್ಲ, ಅವರ ವ್ಯಕ್ತಿತ್ವವೂ ಕಾರಣ’ ಎಂದು ಹೇಳಿದರು.

‘ವಿಶಾಖಪಟ್ಟಣ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ. ರಾಯಪುರ–ವಿಶಾಖಪಟ್ಟಣ ಆರ್ಥಿಕ ಕಾರಿಡಾರ್‌ನಿಂದ ಈ ಭಾಗದ ಆರ್ಥಿಕತೆ ಮತ್ತಷ್ಟು ಬಲಗೊಳ್ಳಲಿದೆ’ ಎಂದರು.

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಮಾತನಾಡಿ, ‘2014ಕ್ಕೂ ಮೊದಲು, ರೈಲ್ವೆ ಯೋಜನೆಗಳಿಗಾಗಿ ಬಜೆಟ್‌ನಲ್ಲಿ ಆಂಧ್ರಪ್ರದೇಶಕ್ಕೆ ₹ 886 ಕೋಟಿ ನೀಡಲಾಗುತ್ತಿತ್ತು. ಈಗ ಈ ಮೊತ್ತವನ್ನು ₹ 7,032 ಕೋಟಿಗೆ ಹೆಚ್ಚಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.