ADVERTISEMENT

ಉಪಗ್ರಹಕ್ಕೆ ಕ್ಷಿಪಣಿ: ಭಾರತವೀಗ ವಿಶ್ವದ ‘ಸ್ಪೇಸ್‌ ಸೂಪರ್‌ ಪವರ್’

ಉಪಗ್ರಹ ನಿಗ್ರಹ ಕ್ಷಿಪಣಿ ಯಶಸ್ವಿ ಪ್ರಯೋಗ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2019, 8:51 IST
Last Updated 27 ಮಾರ್ಚ್ 2019, 8:51 IST
   

ನವದೆಹಲಿ: ಬಾಹ್ಯಾಕಾಶದಲ್ಲಿರುವ ಉಪಗ್ರಹವನ್ನು ಕ್ಷಿಪಣಿ ಪ್ರಯೋಗಿಸಿ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿರುವ ವಿಶ್ವದ ಕೆಲವೇ ದೇಶಗಳ ಸಾಲಿಗೆ ಭಾರತವೂ ಇಂದು ಸೇರ್ಪಡೆಯಾಯಿತು. ಪ್ರಧಾನಿ ನರೇಂದ್ರ ಮೋದಿ ಸ್ವತಃ ವಿಷಯ ಪ್ರಕಟಿಸಿ ‘ಭಾರತವು ಈಗ ವಿಶ್ವದ ಸ್ಪೇಸ್‌ ಸೂಪರ್‌ಪವರ್’ (ಬಾಹ್ಯಾಕಾಶ ಶಕ್ತ) ರಾಷ್ಟ್ರವಾಗಿದೆ’ ಎಂದು ಘೋಷಿಸಿದರು.

ವಿಶ್ವದಲ್ಲಿ ಈಗ ಅಮೆರಿಕ, ರಷ್ಯಾ ಮತ್ತು ಚೀನಾಗಳಿಗೆ ಮಾತ್ರ ಉಪಗ್ರಹಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಇದೆ. ಈ ಸಾಲಿಗೆ ಭಾರತವೂ ಇದೀಗ ಸೇರ್ಪಡೆಗೊಂಡಂತೆ ಅಗಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ವಿಜ್ಞಾನಿಗಳು ಈ ಸಾಧನೆ ಮಾಡಿದ್ದಾರೆ.

‘ಈಚೆಗಷ್ಟೇ ಭಾರತವು ಉಪಗ್ರಹ ನಿಗ್ರಹ ಕ್ಷಿಪಣಿ ಪ್ರಯೋಗಿಸಿಕೆಳ ಕಕ್ಷೆಯಲ್ಲಿದ್ದ(ಭೂಮಿಯ ಸನಿಹ) ಉಪಗ್ರಹವನ್ನು ಹೊಡೆದುರುಳಿಸಿತು. ಮಿಷನ್ ಶಕ್ತಿ ಯೋಜನೆಯಡಿ ನಮ್ಮ ವಿಜ್ಞಾನಿಗಳು ಈ ಸಾಧನೆ ಮಾಡಿದ್ದಾರೆ. ಕೇವಲ ಮೂರು ನಿಮಿಷಗಳಲ್ಲಿ ಕಾರ್ಯಾಚರಣೆ ಪೂರ್ಣಗೊಂಡಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾಡಿದ ತಮ್ಮ ತುರ್ತು ಭಾಷಣದಲ್ಲಿ ಘೋಷಿಸಿದರು.

ADVERTISEMENT

‘ಭೂಮಿಗೆ ಸನಿಹದ ಕಕ್ಷೆಯಲ್ಲಿದ್ದ (Low Earth Orbit – LEO) ಉಪಗ್ರಹವನ್ನು ಹೊಡೆದುರುಳಿಸಿದ ಉಪಗ್ರಹ ನಿಗ್ರಹ ಕ್ಷಿಪಣಿ‘ಎ–ಸ್ಯಾಟ್’ (A-SAT) ಬತ್ತಳಿಕೆಗೆ ಸೇರುವುದರೊಂದಿಗೆಭಾರತವು ಇದೀಗ ವಿಶ್ವದ ಬಾಹ್ಯಾಕಾಶ ಶಕ್ತಿಯಾಗಿ ಹೊರಹೊಮ್ಮಿದೆ. ಭೂಮಿಯಿಂದ 2000 ಕಿ.ಮೀ. ಎತ್ತರವನ್ನು ಭೂ ಸನಿಹದ ಕಕ್ಷೆ ಎನ್ನುತ್ತಾರೆ. ಎ–ಸ್ಯಾಟ್ ಕ್ಷಿಪಣಿ ವ್ಯವಸ್ಥೆಯು ಈ ಕಕ್ಷೆಯಲ್ಲಿರುವ ಉಪಗ್ರಹಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆ’ ಎಂದು ಮೋದಿ ಹೇಳಿದರು.

‘ಮಿಷನ್ ಶಕ್ತಿ ಹೆಸರಿನ ಈ ಸಾಹಸವು ಭಾರತದ ಸುರಕ್ಷೆ, ಆರ್ಥಿಕ ಪ್ರಗತಿ ಮತ್ತು ತಾಂತ್ರಿಕ ಮುನ್ನಡೆಯ ದ್ಯೋತಕವಾಗಿದೆ. ನಮ್ಮ ಶಕ್ತಿಯನ್ನು ನಾವು ಯಾರ ವಿರುದ್ಧವೂ ಬಳಸುವುದಿಲ್ಲ ಎಂದು ವಿಶ್ವ ಸಮುದಾಯಕ್ಕೆ ನಾನು ಖಾತ್ರಿಪಡಿಸುತ್ತೇನೆ. ಇದು ಸಂಪೂರ್ಣವಾಗಿ ಭಾರತದಭದ್ರತೆಗೆಸಂಬಂಧಿಸಿದ ವಿಚಾರವಾಗಿದೆ. ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರ ಪೈಪೋಟಿಯನ್ನೂ ನಾವು ವಿರೋಧಿಸುತ್ತೇವೆ. ಎ–ಸ್ಯಾಟ್ ಪರೀಕ್ಷೆಯು ಯಾವುದೇ ಅಂತರರಾಷ್ಟ್ರೀಯ ನಿಯಮ, ಕಾನೂನು ಅಥವಾ ಒಪ್ಪಂದವನ್ನು ಉಲ್ಲಂಘಿಸುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.‘ಮಿಷನ್ ಶಕ್ತಿ ಎರಡು ಕಾರಣಕ್ಕೆ ಮುಖ್ಯವಾಗುತ್ತೆ. ಮೊದನೆಯದಾಗಿ, ಭಾರತವುವಿಶ್ವದಲ್ಲಿ ಈ ಸಾಮರ್ಥ್ಯ ಹೊಂದಿದನಾಲ್ಕನೇ ದೇಶವಾಗಿದೆ. ಎರಡನೆಯದಾಗಿ, ಈ ಪ್ರಯೋಗದ ಸಂಪೂರ್ಣ ಜವಾಬ್ದಾರಿಯನ್ನು ಭಾರತವೇ ನಿರ್ವಹಿಸಿದೆ. ವಿಶ್ವದ ಬಾಹ್ಯಾಕಾಶ ಶಕ್ತಿಯಾಗಿ ಭಾರತ ಎತ್ತರದಲ್ಲಿ ನಿಂತಿದೆ’ ಎಂದು ಮೋದಿ ತಿಳಿಸಿದರು.

ಕಾಂಗ್ರೆಸ್ ಅಭಿನಂದನೆ

ಭಾರತವನ್ನು ಬಾಹ್ಯಾಕಾಶ ಸೂಪರ್‌ ಪವರ್ ಮಾಡಿದ ‘ಎ–ಸ್ಯಾಟ್‌’ ಪ್ರಯೋಗವನ್ನುಕಾಂಗ್ರೆಸ್‌ ಸ್ವಾಗತಿಸಿದೆ.

‘ಈ ಸಾಧನೆಗಾಗಿ ನಾವು ಇಸ್ರೊ ಮತ್ತು ಭಾರತ ಸರ್ಕಾರವನ್ನು ಅಭಿನಂದಿಸುತ್ತೇವೆ. 1961ರಲ್ಲಿ ಜವಾಹರಲಾಲ್ ನೆಹರು ಬಾಹ್ಯಾಕಾಶ ಯೋಜನೆ ಆರಂಭಿಸಿದ್ದರು. ಇಂದಿರಾಗಾಂಧಿ ಆರಂಭಿಸಿದ ಇಸ್ರೊ ಹಲವು ಸಾಧನೆಗಳ ಮೂಲಕಭಾರತಕ್ಕೆ ಹೆಮ್ಮೆ ತಂದುಕೊಂಡಿದೆ’ ಎಂದು ಕಾಂಗ್ರೆಸ್ ಹೇಳಿದೆ.

ಭದ್ರತಾ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿ ಸಭೆ ನಡೆದ ಕೆಲವೇ ಗಂಟೆಗಳ ನಂತರಪ್ರಧಾನಿ ಅವರ ಈ ಹೇಳಿಕೆ ಹೊರಬಿದ್ದಿದೆ ಎಂದು ಕೆಲ ಸುದ್ದಿ ವಾಹಿನಿಗಳು ವರದಿ ಮಾಡಿವೆ. ಇದು ಕೇವಲ ಕಾಕತಾಳೀಯವೇ ಅಥವಾ ಸಭೆಯಲ್ಲಿ ಪ್ರಧಾನಿ ಸಂಪುಟ ಸಹೋದ್ಯೋಗಿಗಳಿಗೆ ಈ ಮಾಹಿತಿ ನೀಡಿದ್ದರೆ ಎಂಬುದು ಇನ್ನೂ ಬಹಿರಂಗಗೊಂಡಿಲ್ಲ.

ಚುನಾವಣಾ ಆಯೋಗವು ಲೋಕಸಭೆ ಚುನಾವಣೆ ವೇಳಾಪಟ್ಟಿ ಪ್ರಕಟಿಸಿದ 15 ದಿನಗಳ ನಂತರ ಪ್ರಧಾನಿ ‘ದೇಶ ಬಾಹ್ಯಾಕಾಶ ಸೂಪರ್‌ಪವರ್’ ಆದ ಮಾಹಿತಿ ಬಹಿರಂಗಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.