ನವದೆಹಲಿ: ಈ ಬಾರಿ ಏಪ್ರಿಲ್‌ನಿಂದ ಜೂನ್‌ವರೆಗೆ ದೇಶವು ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನವನ್ನು ಅನುಭವಿಸುವ ನಿರೀಕ್ಷೆಯಿದೆ. ಮಧ್ಯ ಮತ್ತು ಪೂರ್ವ ಭಾರತ ಹಾಗೂ ವಾಯುವ್ಯ ಬಯಲು ಪ್ರದೇಶಗಳಲ್ಲಿ ಹೆಚ್ಚಿನ ಬಿಸಿ ಗಾಳಿಯ ದಿನಗಳು ಇರುತ್ತವೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಸೋಮವಾರ ತಿಳಿಸಿದೆ.
ಪಶ್ಚಿಮ ಮತ್ತು ಪೂರ್ವ ಭಾರತದ ಕೆಲವು ಪ್ರದೇಶಗಳನ್ನು ಹೊರತುಪಡಿಸಿ, ದೇಶದ ಹೆಚ್ಚಿನ ಭಾಗಗಳು ಸಾಮಾನ್ಯಕ್ಕಿಂತ ಗರಿಷ್ಠ ತಾಪಮಾನವನ್ನು ಕಾಣಲಿವೆ.
ಹೆಚ್ಚಿನ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ ಎಂದು ಐಎಂಡಿ ಮುಖ್ಯಸ್ಥ ಮೃತ್ಯುಂಜಯ್ ಮೊಹಾಪಾತ್ರ ಆನ್‌ಲೈನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
‘ಏಪ್ರಿಲ್‌ನಿಂದ ಜೂನ್‌ವರೆಗೆ ಉತ್ತರ ಮತ್ತು ಪೂರ್ವ ಭಾರತದ ಹೆಚ್ಚಿನ ಭಾಗಗಳು, ಮಧ್ಯ ಭಾರತ ಮತ್ತು ವಾಯುವ್ಯ ಭಾರತದ ಬಯಲು ಪ್ರದೇಶಗಳು ಸಾಮಾನ್ಯಕ್ಕಿಂತ ಎರಡರಿಂದ ನಾಲ್ಕು ಹೆಚ್ಚು ಶಾಖದ ಅಲೆಯ ದಿನಗಳನ್ನು ಅನುಭವಿಸುವ ನಿರೀಕ್ಷೆಯಿದೆ’ಎಂದು ಅವರು ತಿಳಿಸಿದ್ದಾರೆ.
ಸಾಮಾನ್ಯವಾಗಿ, ಏಪ್ರಿಲ್‌ನಿಂದ ಜೂನ್‌ವರೆಗೆ ಭಾರತದಲ್ಲಿ ನಾಲ್ಕರಿಂದ ಏಳು ಶಾಖದ ಅಲೆಯ ದಿನಗಳು ದಾಖಲಾಗುತ್ತವೆ.
ವಾಯುವ್ಯ ಭಾರತವು ಬೇಸಿಗೆಯಲ್ಲಿ ಎರಡು ಪಟ್ಟು ಹೆಚ್ಚಿನ ಶಾಖದ ಅಲೆಯ ದಿನಗಳನ್ನು ಎದುರಿಸಬಹುದು ಎಂದು ಐಎಂಡಿ ಅಧಿಕಾರಿಯೊಬ್ಬರು ಈ ಹಿಂದೆ ಹೇಳಿದ್ದರು.
ಈ ಪ್ರದೇಶವು ಸಾಮಾನ್ಯವಾಗಿ ಈ ಋತುವಿನಲ್ಲಿ ಐದರಿಂದ ಆರು ಶಾಖದ ಅಲೆಯ ದಿನಗಳನ್ನು ಅನುಭವಿಸುತ್ತದೆ.
ರಾಜಸ್ಥಾನ, ಗುಜರಾತ್, ಹರಿಯಾಣ, ಪಂಜಾಬ್, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ, ಛತ್ತೀಸ್ಗಢ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕ ಮತ್ತು ತಮಿಳುನಾಡಿನ ಉತ್ತರ ಭಾಗಗಳು ಸಾಮಾನ್ಯಕ್ಕಿಂತ ಹೆಚ್ಚಿನ ಶಾಖದ ಅಲೆಯ ದಿನಗಳನ್ನು ಕಾಣುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ಏಪ್ರಿಲ್‌ನಲ್ಲಿ, ಭಾರತದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಗರಿಷ್ಠ ತಾಪಮಾನ ದಾಖಲಾಗುವ ಸಾಧ್ಯತೆಯಿದೆ. ಆದರೂ, ದಕ್ಷಿಣ ಮತ್ತು ವಾಯುವ್ಯ ಪ್ರದೇಶಗಳಲ್ಲಿನ ಕೆಲವು ಪ್ರದೇಶಗಳಲ್ಲಿ ಸಾಮಾನ್ಯ ತಾಪಮಾನ ಕಂಡುಬರಬಹುದು. ವಾಯುವ್ಯ ಮತ್ತು ಈಶಾನ್ಯದಲ್ಲಿನ ಕೆಲವು ಸ್ಥಳಗಳನ್ನು ಹೊರತುಪಡಿಸಿ, ದೇಶದ ಹೆಚ್ಚಿನ ಭಾಗಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ, ಅಲ್ಲಿ ತಾಪಮಾನವು ಸಾಮಾನ್ಯ ಅಥವಾ ಸ್ವಲ್ಪ ಕಡಿಮೆ ಇರಬಹುದು ಎಂದು ಮೊಹಾಪಾತ್ರ ಹೇಳಿದ್ದಾರೆ.
ಈ ಬೇಸಿಗೆಯಲ್ಲಿ ದೇಶವು ಶೇ 9ರಿಂದ 10ರಷ್ಟು ಗರಿಷ್ಠ ವಿದ್ಯುತ್ ಬೇಡಿಕೆ ಬೆಳವಣಿಗೆಗೆ ಸಿದ್ಧವಾಗಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ.
ಕಳೆದ ವರ್ಷ, ಮೇ 30ರಂದು ದೇಶದ ಗರಿಷ್ಠ ವಿದ್ಯುತ್ ಬೇಡಿಕೆ 250 ಗಿಗಾವ್ಯಾಟ್‌ಗಳನ್ನು ದಾಟಿದೆ.-- ಇದು ಅಂದಾಜಿಗಿಂತ ಶೇ 6.3ರಷ್ಟು ಹೆಚ್ಚಾಗಿತ್ತು.
ಹವಾಮಾನ ಬದಲಾವಣೆಯಿಂದ ಉಂಟಾಗುವ ಶಾಖದ ಒತ್ತಡವು ವಿದ್ಯುತ್ ಬೇಡಿಕೆಯನ್ನು ಹೆಚ್ಚಿಸುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.