ADVERTISEMENT

Operation Sindoor | ಪಾಕಿಸ್ತಾನ ಸೇನೆಗೆ ಭಾರಿ ನಷ್ಟ: ಭಾರತೀಯ ಸೇನೆ

ಪಿಟಿಐ
Published 12 ಮೇ 2025, 4:03 IST
Last Updated 12 ಮೇ 2025, 4:03 IST
   

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಮೂರು ದಿನಗಳ ಘರ್ಷಣೆಯಲ್ಲಿ ಭಾರತವು ಪಾಕಿಸ್ತಾನ ಸೇನೆಗೆ ಅಪಾರ ನಷ್ಟವನ್ನುಂಟುಮಾಡಿದೆ. ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಕೆಲವು ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ. ಅಲ್ಲದೆ ರಾಜಧಾನಿ ಇಸ್ಲಾಮಾಬಾದ್‌ಗೆ ಸಮೀಪವಿರುವ ಪ್ರಮುಖ ಸೇನಾ ನೆಲೆಗಳಿಗೆ ಹಾನಿ ಮಾಡಿದೆ ಎಂದು ಭಾರತೀಯ ಸೇನೆ ಭಾನುವಾರ ತಿಳಿಸಿದೆ.

ಮೇ 7ರಿಂದ 10ರವರೆಗೆ ಭಾರತದ ಸೇನಾ ಪಡೆಗಳು ನಡೆಸಿದ ದಾಳಿಯಲ್ಲಿ ಪಾಕಿಸ್ತಾನ ಸೇನೆಯ 35ರಿಂದ 40 ಮಂದಿ ಯೋಧರು ಮೃತಪಟ್ಟಿದ್ದಾರೆ. ಭಾರತ ತನ್ನ ಅಪೇಕ್ಷಿತ ಗುರಿಗಳನ್ನು ಸಾಧಿಸಿತು. ಮತ್ತೆ ಪಾಕ್‌ ಇಂತಹ ದುಸ್ಸಾಹಸ ಮುಂದುವರಿಸಿದರೆ, ಭಾರಿ ಬೆಲೆ ತೆರ ಬೇಕಾಗುತ್ತದೆ ಎಂದು ಮಿಲಿಟರಿ ಕಾರ್ಯಾಚರಣೆಗಳ ಮಹಾ ನಿರ್ದೇಶಕ (ಡಿಜಿಎಂಒ) ಲೆಫ್ಟಿನೆಂಟ್‌ ಜನರಲ್‌ ರಾಜೀವ್‌ ಘಯಿ ಎಚ್ಚರಿಕೆ ನೀಡಿದ್ದಾರೆ.

ಭಾರತೀಯ ಸೇನೆಯೂ ಕೆಲವು ನಷ್ಟಗಳನ್ನು ಅನುಭವಿಸಿದೆ ಎಂದು ಒಪ್ಪಿಕೊಂಡಿದೆ. ಆದರೆ ಕಾರ್ಯಾಚರಣೆ ನಡೆಯುತ್ತಿರುವುದರಿಂದ ವಿವರಗಳನ್ನು ನೀಡಲು ನಿರಾಕರಿಸಿದೆ.

ADVERTISEMENT

ಭಾರತದ ಯುದ್ಧ ವಿಮಾನಗಳನ್ನು ಪಾಕ್‌ ಪಡೆಗಳು ಹೊಡೆದುರುಳಿಸಿವೆ ಎಂಬ ಮಾಧ್ಯಮಗಳ ವರದಿಗೆ ಪ್ರತಿಕ್ರಿಯಿಸಿದ ಏರ್‌ಮಾರ್ಷಲ್‌ ಎ.ಕೆ. ಭಾರ್ತಿ, ನಾವು ಯುದ್ಧ ಸನ್ನಿವೇಶದಲ್ಲಿದ್ದೇವೆ. ‘ನಷ್ಟ ಯುದ್ಧದ ಭಾಗ’ ಎಂದರು. ನೀವು ಕೇಳಬೇಕಾದ ಪ್ರಶ್ನೆ ಏನೆಂದರೆ ಉಗ್ರರ ನೆಲೆಗಳನ್ನು ನಾಶಮಾಡುವ ನಮ್ಮ ಗುರಿಗಳನ್ನು ನಾವು ಸಾಧಿಸಿದ್ದೇವೆಯೇ ಎಂದು?. ಇದಕ್ಕೆ ಉತ್ತರ ಖಂಡಿತವಾಗಿಯೂ ಹೌದು ಎಂದಿದ್ದಾರೆ.

‘ನಾವು ನಿಗದಿಪಡಿಸಿದ ಗುರಿ ಸಾಧಿಸಿದ್ದೇವೆ. ನಮ್ಮ ಎಲ್ಲ ಪೈಲಟ್‌ಗಳು ಮರಳಿ ಮನೆಗೆ ಬಂದಿದ್ದಾರೆ’ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.