ADVERTISEMENT

₹6 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆ: ಜಪಾನ್‌ ಪ್ರಧಾನಿ ಭರವಸೆ

ಹಿಂದೂ ಮಹಾಸಾಗರ–ಪೆಸಿಫಿಕ್‌ ಪ್ರದೇಶದಲ್ಲಿರುವ ದೇಶಗಳ ಅಭಿವೃದ್ಧಿಗೆ ಒತ್ತು

ಏಜೆನ್ಸೀಸ್
Published 20 ಮಾರ್ಚ್ 2023, 17:40 IST
Last Updated 20 ಮಾರ್ಚ್ 2023, 17:40 IST
ನವದೆಹಲಿಯ ಬುದ್ಧ ಜಯಂತಿ ಉದ್ಯಾನದಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್‌ ಪ್ರಧಾನಿ ಕಿಶಿದಾ ಅವರು ಗೋಲ್‌ಗಪ್ಪಾ ಸೇರಿದಂತೆ ಹಲವು ಭಾರತೀಯ ತಿನಿಸುಗಳನ್ನು ಸವಿದರು –ಪಿಟಿಐ ಚಿತ್ರ
ನವದೆಹಲಿಯ ಬುದ್ಧ ಜಯಂತಿ ಉದ್ಯಾನದಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್‌ ಪ್ರಧಾನಿ ಕಿಶಿದಾ ಅವರು ಗೋಲ್‌ಗಪ್ಪಾ ಸೇರಿದಂತೆ ಹಲವು ಭಾರತೀಯ ತಿನಿಸುಗಳನ್ನು ಸವಿದರು –ಪಿಟಿಐ ಚಿತ್ರ   

ನವದೆಹಲಿ: ಹಿಂದೂ ಮಹಾಸಾಗರ–ಪೆಸಿಫಿಕ್‌ ಪ್ರದೇಶವನ್ನು ಮುಕ್ತ ಹಾಗೂ ಸ್ವತಂತ್ರವಾಗಿರಿಸುವ ಹೊಸ ಯೋಜನೆಯೊಂದನ್ನು ಜಪಾನ್‌ ಪ್ರಧಾನಿ ಫೆಮಿಯೊ ಕಿಶಿದಾ ಅವರು ಸೋಮವಾರ ಪ್ರಕಟಿಸಿದರು.

ಕಿಶಿದಾ ಅವರು 27 ಗಂಟೆಗಳ ಭಾರತ ಭೇಟಿಗಾಗಿ ಸೋಮವಾರ ಬೆಳಿಗ್ಗೆ ನವದೆಹಲಿಗೆ ಬಂದಿಳಿದರು. ನಂತರ, ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್‌ ಪ್ರಧಾನಿ ಕಿಶಿದಾ ಅವರು ವಿವಿಧ ಕ್ಷೇತ್ರಗಳಲ್ಲಿ ಎರಡೂ ದೇಶಗಳ ಸಹಕಾರಗಳ ಕುರಿತು ಇಲ್ಲಿನ ಹೈದರಾಬಾದ್‌ ಹೌಸ್‌ನಲ್ಲಿ ಮಾತುಕತೆ ನಡೆಸಿದರು. ಬಳಿಕ ಪ್ರಧಾನಿ ಕಿಶಿದಾ ಅವರು ಮಾತನಾಡಿದರು.

‘ಹಿಂದೂ ಮಹಾಸಾಗರ–ಪೆಸಿಫಿಕ್‌ ಪ್ರದೇಶದಲ್ಲಿರುವ ದೇಶಗಳ ಆರ್ಥಿಕತೆಗೆ (ಕಾರ್ಖಾನೆ ಸ್ಥಾಪನೆಯಿಂದ ವಿಪತ್ತು ತಡೆವರೆಗೆ) ಸಹಾಯ ಮಾಡುವ ಉದ್ದೇಶದಿಂದ 75 ಬಿಲಿಯನ್‌ ಡಾಲರ್‌ನಷ್ಟು (ಅಂದಾಜು 6.15 ಲಕ್ಷ ಕೋಟಿ) ಹೂಡಿಕೆ ಮಾಡಲಾಗುವುದು. ನಮ್ಮ ಗುರಿಯನ್ನು ತಲುಪುವಲ್ಲಿ ಭಾರತವು ಮುಖ್ಯವಾದ ಪಾತ್ರವಹಿಸಲಿದೆ’ ಎಂದು ಕಿಶಿದಾ ಅವರು ಅಭಿಪ್ರಾಯಪಟ್ಟರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ ಅವರು, ‘ಭಾರತ–ಜಪಾನ್‌ನ ಪಾಲುದಾರಿಕೆಯು ಎರಡೂ ದೇಶಗಳಿಗೆ ಮಾತ್ರ ಮುಖ್ಯವಾದುದಲ್ಲ. ಬದಲಿಗೆ ಹಿಂದೂ ಮಹಾಸಾಗರ–ಪೆಸಿಫಿಕ್‌ ‍ಪ್ರದೇಶದಲ್ಲಿ ಶಾಂತಿ, ಸ್ಥಿರತೆ ನೆಲೆಸುವಲ್ಲಿಯೂ ನಮ್ಮ ಸಂಬಂಧ ಮುಖ್ಯ ಪಾತ್ರವಹಿಸುತ್ತದೆ’ ಎಂದರು.

ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಚೀನಾದ ಆಕ್ರಮಣಕಾರಿ ವರ್ತನೆಯನ್ನು ತಡೆಯಲು ಈ ದೇಶಗಳ ಜೊತೆಗೆ ಸ್ನೇಹವನ್ನು ಗಟ್ಟಿ ಮಾಡಿಕೊಳ್ಳುವ ಉದ್ದೇಶದಿಂದ ಕಿಶಿದಾ ಅವರು ಈ ಯೋಜನೆಯ ಘೋಷಣೆ ಮಾಡಿದ್ದಾರೆ ಎನ್ನಲಾಗಿದೆ.

ರಕ್ಷಣಾ ಕ್ಷೇತ್ರ–ವಿದೇಶಿ ನೇರ ಹೂಡಿಕೆಗೆ ಭಾರತ ಮುಕ್ತ: ‘ಮೋದಿ ಹಾಗೂ ಕಿಶಿದಾ ಅವರ ನಡುವೆ ರಕ್ಷಣಾ ಉಪಕರಣಗಳು ಮತ್ತು ಸೆಮಿಕಂಡಕ್ಟರ್‌ಗಳ ತಯಾರಿಕೆ, ಆರ್ಥಿಕ ಸಹಭಾಗಿತ್ವ, ಹವಾಮಾನ ಹಾಗೂ ಇಂಧನ ಕುರಿತಾಗಿ ಚರ್ಚೆಗಳು ನಡೆದವು’ ಎಂದು ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ವಿನಯ್‌ ಕ್ವಾತ್ರಾ ತಿಳಿಸಿದರು.

‘ರಕ್ಷಣಾ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಿಕೆ ಹಾಗೂ ವಿದೇಶಿ ನೇರ ಹೂಡಿಕೆಗೆ ಭಾರತವು ಮುಕ್ತವಾಗಿದೆ’ ಎಂದು ಅವರು ಮಾಹಿತಿ ನೀಡಿದರು.

‘ಭಾರತದ ತಯಾರಿಕಾ ವಲಯದಲ್ಲಿ ಅಗಾಧವಾದ ಅವಕಾಶಗಳು ಹಾಗೂ ಅನುಕೂಲತೆಗಳು ಇವೆ. ಆದ್ದರಿಂದ ಭಾರತದ ತಯಾರಿಕಾ ವಲಯದಲ್ಲಿ ಹೂಡಿಕೆ ಮಾಡಲು ಜಪಾನ್‌ ಕಂಪೆನಿಗಳನ್ನು ಭಾರತವು ಆಹ್ವಾನಿಸಿತು. ‘ಮೇಕ್‌ ಇನ್‌ ಇಂಡಿಯಾ’ ಯೋಜನೆಯು ಭಾರತಕ್ಕಷ್ಟೇ ಸೀಮಿತವಲ್ಲ ಎಂದು ಮೋದಿ ಹೇಳಿದ್ದಾರೆ.

ಇತರ ಪ್ರಮುಖಾಂಶಗಳು

* ಉಕ್ರೇನ್‌ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧವನ್ನು ಆದಷ್ಟು ಬೇಗ ನಿಲ್ಲಿಸಬೇಕು. ಇದಕ್ಕಾಗಿ ಜಗತ್ತಿನ ದಕ್ಷಿಣ ಭಾಗದ ರಾಷ್ಟ್ರಗಳು ಒಗ್ಗಟ್ಟು ಪ್ರದರ್ಶಿಸಬೇಕು. ಆದರೆ, ಉಕ್ರೇನ್‌ ಯುದ್ಧದ ಕುರಿತು ಭಾರತ ಹಾಗೂ ಜಪಾನ್‌ ನಿಲುವಿನಲ್ಲಿ ವ್ಯತ್ಯಾಸವಿದೆ

* ಮುಂಬೈ–ಅಹಮದಾಬಾದ್‌ ನಡುವಿನ ಬುಲೆಟ್‌ ರೈಲು ಯೋಜನೆಗೆ ಜಪಾನ್‌ ನೀಡುವ ನಾಲ್ಕನೇ ಕಂತಿನ ಸಾಲಕ್ಕೆ (ಸುಮಾರು 18 ಸಾವಿರ ಕೋಟಿ) ಸಂಬಂಧಿಸಿದ ಟಿಪ್ಪಣಿಯನ್ನು ಎರಡು ದೇಶಗಳು ವಿನಿಮಯ ಮಾಡಿಕೊಂಡಿವೆ

* ಇದೇ ಮೇನಲ್ಲಿ ಜಪಾನ್‌ನ ಹಿರೋಷಿಮಾದಲ್ಲಿ ನಡೆಯಲಿರುವ ಜಿ7 ಶೃಂಗಸಭೆಗೆ ಪ್ರಧಾನಿ ಮೋದಿ ಅವರನ್ನು ಕಿಶಿದಾ ಆಹ್ವಾನಿಸಿದರು

ಕಿಶಿದಾ ಅವರಿಗೆ ಕರ್ನಾಟಕದಲ್ಲಿ ತಯಾರಾದ ಬುದ್ಧನ ವಿಗ್ರಹ ಉಡುಗೊರೆ

ನವದೆಹಲಿ: ಚುನಾವಣೆ ನಡೆಯಲಿರುವ ರಾಜ್ಯಗಳಿಂದ ತಯಾರಾದ ಉಡುಗೊರೆಗಳನ್ನು ಅತಿಥಿಗಳಿಗೆ ನೀಡುವ ಪರಿಪಾಟವನ್ನು ಪ್ರಧಾನಿ ಮೋದಿ ಅವರು ಮುಂದುವರಿಸಿದ್ದಾರೆ. ಜಪಾನ್‌ ಪ್ರಧಾನಿ ಕಿಶಿದಾ ಅವರಿಗೆ ಕರ್ನಾಟಕದ ಕಲಾವಿದ ಶ್ರೀಗಂಧದಿಂದ ತಯಾರಿಸಿದ ಬುದ್ಧನ ವಿಗ್ರಹವನ್ನು ಉಡುಗೊರೆ ನೀಡಿದ್ದಾರೆ. ಕದಂಬ ಮರದಲ್ಲಿ ತಯಾರಿಸಲಾದ ಜಾಲಿ ಪೆಟ್ಟಿಗೆಯಲ್ಲಿ ಒಳಗೆ ಧ್ಯಾನ ಮುದ್ರೆಯಲ್ಲಿರುವ ಬುದ್ಧನ ವಿಗ್ರಹವನ್ನು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.