
ನವದೆಹಲಿ: ಕೃತಕ ಬುದ್ಧಿಮತ್ತೆ (ಎಐ)ತಂತ್ರಜ್ಞಾನದ ಬಳಕೆಯಲ್ಲಿ ಭಾರತವು ಮುಂಚೂಣಿಯಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.
ಎಐ ಕ್ಷೇತ್ರದಲ್ಲಿ ಭಾರತವು ದಾಪುಗಾಲಿಡುತ್ತಿರುವುದು ದೇಶದ ಮಹತ್ವಾಕಾಂಕ್ಷೆ ಮತ್ತು ಹೊಣೆಗಾರಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.
‘ಎಐ ಕುರಿತ ಚರ್ಚೆಗಾಗಿ ಜಗತ್ತನ್ನು ಒಟ್ಟುಗೂಡಿಸಲಾಗಿದೆ. ಭಾರತವು ಶೃಂಗದ ಆತಿಥ್ಯ ವಹಿಸಿದೆ. ಜಾಗತಿಕ ನಾಯಕರು, ಕೈಗಾರಿಕೋದ್ಯಮಿಗಳು, ನೀತಿ ನಿರೂಪಕರು, ಸಂಶೋಧಕರು ಮತ್ತು ತಂತ್ರಜ್ಞಾನ ಹಿಂಬಾಲಕರಿಗೆ ಸ್ವಾಗತ’ ಎಂದು ‘ಎಕ್ಸ್’ನಲ್ಲಿ ಮೋದಿ ಹೇಳಿದ್ದಾರೆ.
‘ಸರ್ವಜನ ಹಿತಾಯಃ, ಸರ್ವಜನ ಸುಖಾಯಃ’ ಎಂಬ ಧ್ಯೇಯವಾಕ್ಯದಡಿಯಲ್ಲಿ ಶೃಂಗವನ್ನು ಆಯೋಜಿಸಲಾಗಿದೆ. ಇದು ಮಾನವ ಕೇಂದ್ರೀತ ಪ್ರಗತಿಗಾಗಿ ಎಐ ಬಳಕೆ ಮಾಡುವ ನಮ್ಮೆಲ್ಲರ ಬದ್ಧತೆಯ ಸಂಕೇತ’ ಎಂದಿದ್ದಾರೆ.
‘ಆರೋಗ್ಯ, ಶಿಕ್ಷಣ, ಕೃಷಿ ಮತ್ತು ಆಡಳಿತ ಮತ್ತು ಉದ್ಯಮ ಕ್ಷೇತ್ರಗಳು ಎಐನಿಂದಾಗಿ ಸ್ಥಿತ್ಯಂತರಗೊಳ್ಳುತ್ತಿವೆ. ಎಐ ಶೃಂಗದ ನಿರ್ಣಯಗಳು ಭವಿಷ್ಯವನ್ನು ರೂಪಿಸಲಿದೆ ಎಂಬ ವಿಶ್ವಾಸವಿದೆ’ ಎಂದು ಹೇಳಿದ್ದಾರೆ.
ಭಾರತಕ್ಕೆ ಅಗಾಧವಾದ ಶಕ್ತಿ ಇದೆ. ಉತ್ತಮ ಡಿಜಿಟಲ್ ಮೂಲಸೌಕರ್ಯವಿದೆ, ಪ್ರತಿಭಾನ್ವಿತರಿದ್ದಾರೆ, ಕಾನೂನು ಚೌಕಟ್ಟು ಸದೃಢವಾಗಿದೆ. ಹೀಗಾಗಿ ಎಐ ಕ್ಷೇತ್ರದಲ್ಲಿ ಸಾಧಿಸಲು ಇಲ್ಲಿ ವಿಫಲವಾದ ಅವಕಾಶಗಳಿವೆ– ಇವಾನಾ ಬಾರ್ಟೊಲೆಟ್ಟಿ, ಎಐ ಗವರ್ನೆನ್ಸ್ ಆಫೀಸರ್, ವಿಪ್ರೊ
ಎಐ ಕ್ಷೇತ್ರದಲ್ಲಿನ ಭಾರತ ಮತ್ತು ಅಮೆರಿಕ ಪಾಲುದಾರಿಕೆಯು ಆರೋಗ್ಯ, ಶಿಕ್ಷಣ, ಉದ್ಯೋಗ ತರಬೇತಿ, ಡಿಜಿಟಲ್ ಸಾಕ್ಷರತೆ ವಲಯಗಳಲ್ಲಿ ಅಸಾಧಾರಣ ಅವಕಾಶಗಳನ್ನು ಸೃಷ್ಟಿಸಲಿದೆ– ಬಿಪುಲ್ ಸಿಹ್ನಾ, ರುಬ್ರಿಕ್ ಸಿಇಒ
ಎ.ಐ ಶೃಂಗವು ಮಹತ್ವದ್ದಾಗಿದೆ: ಬ್ರಿಟನ್ ಉಪಪ್ರಧಾನಿ
ಲಂಡನ್: ಕೃತಕಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಬೆಳವಣಿಗೆ ಮೇಲೆ ಹೇಗೆ ಪರಿಣಾಮ ಬೀರಲಿದೆ ಉದ್ಯೋಗಾವಕಾಶಗಳನ್ನು ಹೇಗೆ ಸೃಷ್ಟಿಸಲಿದೆ ಸಾರ್ವಜನಿಕ ಸೇವೆಗಳನ್ನು ಹೇಗೆ ಸುಧಾರಿಸಲಿದೆ ಮತ್ತು ಜಗತ್ತಿನಾದ್ಯಂತ ಜನರಿಗೆ ಯಾವ ರೀತಿ ಅನುಕೂಲ ಕಲ್ಪಿಸಲಿದೆ ಎಂಬುದರತ್ತ ಎಐ ಶೃಂಗದಲ್ಲಿ ಬ್ರಿಟನ್ ಗಮನಹರಿಸಲಿದೆ ಎಂದು ಬ್ರಿಟನ್ ಸರ್ಕಾರ ಹೇಳಿದೆ.
ದೆಹಲಿಯಲ್ಲಿ ಸೋಮವಾರದಿಂದ ಎಐ ಶೃಂಗಸಭೆ ಆರಂಭಗೊಂಡಿದ್ದು ಉಪ ಪ್ರಧಾನಿ ಡೇವಿಡ್ ಲ್ಯಾಮಿ ಮತ್ತು ಎಐ ಸಚಿವ ಕನಿಷ್ಕಾ ನಾರಾಯಣ್ ನೇತೃತ್ವದ ಬ್ರಿಟನ್ ನಿಯೋಗವು ಭಾಗಿಯಾಗಿದೆ. ಜಗತ್ತಿನ ಮೂಲೆಮೂಲೆಯ ಜನರ ಜೀವನವನ್ನು ಎಐ ಹೇಗೆ ಸುಧಾರಿಸಬಹುದು ಎಂಬ ಬಗ್ಗೆ ಚರ್ಚೆಗೆ ಚಿಂತನೆ ನಡೆಸಿದೆ.
ಶೃಂಗಕ್ಕೂ ಮುನ್ನ ಮಾತನಾಡಿದ ಲ್ಯಾಮಿ ಅವರು ‘ಈ ಶೃಂಗಸಭೆಯು ಮಹತ್ವದ್ದಾಗಿದ್ದು ಎಐ ತಂತ್ರಜ್ಞಾನವನ್ನು ಸದುಪಯೋಗಿಸಿಕೊಂಡು ಅಂತರರಾಷ್ಟ್ರೀಯ ಪಾಲುದಾರರೊಂದಿಗೆ ಹೇಗೆ ಕೆಲಸ ಮಾಡಬಹುದು ಎಂದು ತೀರ್ಮಾನಿಸಬಹುದಾಗಿದೆ’ ಎಂದರು.
ವಿಜ್ಞಾನ ನಾವೀನ್ಯ ಮತ್ತು ತಂತ್ರಜ್ಞಾನ ಇಲಾಖೆಯು ‘ಭಾರತ–ಬ್ರಿಟನ್ ಸ್ವಾಭಾವಿಕ ತಂತ್ರಜ್ಞಾನ ಪಾಲುದಾರ ರಾಷ್ಟ್ರಗಳು. ಇನ್ಫೊಸಿಸ್ ಟಾಟಾ ಕನ್ಸಲ್‌ಟೆನ್ಸಿ ಸರ್ವೀಸಸ್ ಮತ್ತು ವಿಪ್ರೊದಂತ ದೈತ್ಯ ಸಂಸ್ಥೆಗಳು ಬ್ರಿಟನ್‌ನಲ್ಲೂ ತಮ್ಮ ಕಬಂಧಬಾಹುವನ್ನು ಚಾಚಿವೆ’ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.