ADVERTISEMENT

ಡಿಎನ್‌ಎ ಆಧಾರಿತ ಲಸಿಕೆ ಪಡೆದ ಮೊದಲ ದೇಶ ಭಾರತವಾಗಬಹುದು: ಮನಸುಖ್ ಮಾಂಡವಿಯಾ

ಪಿಟಿಐ
Published 20 ಜುಲೈ 2021, 15:25 IST
Last Updated 20 ಜುಲೈ 2021, 15:25 IST
ಐಸ್ಟಾಕ್ ಚಿತ್ರ
ಐಸ್ಟಾಕ್ ಚಿತ್ರ   

ನವದೆಹಲಿ: ಹಲವು ಭಾರತೀಯ ಕಂಪನಿಗಳು ಕೋವಿಡ್ ಲಸಿಕೆಗಳ ಉತ್ಪಾದನೆಯನ್ನು ಹೆಚ್ಚಿಸುತ್ತಿವೆ. ಭಾರತವು ಡಿಎನ್‌ಎ ಆಧಾರಿತ ಲಸಿಕೆ ಅಭಿವೃದ್ಧಿಪಡಿಸಿದ ವಿಶ್ವದ ಮೊದಲನೆ ದೇಶವಾಗಲಿದೆ ಎಂದು ಆರೋಗ್ಯ ಸಚಿವ ಮನಸುಖ್ ಮಾಂಡವಿಯಾ ಮಂಗಳವಾರ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಕೋವಿಡ್ -19 ನಿರ್ವಹಣೆ ಕುರಿತು ಅಲ್ಪಾವಧಿಯ ಚರ್ಚೆಗೆ ಉತ್ತರಿಸಿದ ಸಚಿವರು, ಹಲವು ಕಂಪನಿಗಳಿಗೆ ಲಸಿಕೆ ತಂತ್ರಜ್ಞಾನದ ವರ್ಗಾವಣೆ ಪ್ರಾರಂಭವಾಗಿದೆ. ದೇಶದಲ್ಲಿ ಲಸಿಕೆ ಕೊರತೆಯನ್ನು ಕಡಿಮೆ ಮಾಡಲು ಮುಂದಿನ ದಿನಗಳಲ್ಲಿ ಅವು ಉತ್ಪಾದನೆಯನ್ನು ಪ್ರಾರಂಭಿಸುತ್ತವೆ ಎಂದು ತಿಳಿಸಿದ್ದಾರೆ.

‘ಕ್ಯಾಡಿಲಾ ತನ್ನ ಡಿಎನ್‌ಎ ಲಸಿಕೆಯ ಮೂರನೇ ಹಂತದ ಪ್ರಯೋಗವನ್ನು ಪೂರ್ಣಗೊಳಿಸಿದ್ದು, ತುರ್ತು ಬಳಕೆಯ ಅನುಮತಿಗಾಗಿ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ)ಕ್ಕೆ ಅರ್ಜಿ ಸಲ್ಲಿಸಿದೆ. ನಮ್ಮ ತಜ್ಞರ ತಂಡವು ಇದನ್ನು ಪರಿಶೀಲಿಸುತ್ತಿದೆ. ಈ ಲಸಿಕೆಯು ಮಾರುಕಟ್ಟೆಗೆ ಬಂದ ಬಳಿಕ, ಭಾರತವು ಡಿಎನ್‌ಎ ಲಸಿಕೆ ಅಭಿವೃದ್ಧಿಪಡಿಸಿದ ಏಕೈಕ ದೇಶವಾಗಿರುತ್ತದೆ ಎಂದು ರಾಜ್ಯಸಭೆಯಲ್ಲಿ ಮಾಂಡವಿಯಾ ಹೇಳಿದರು.

ADVERTISEMENT

ದೇಶವು ತಿಂಗಳಿಗೆ 11-12 ಕೋಟಿ ಡೋಸ್ ಸೀರಮ್ ಇನ್‌ಸ್ಟಿಟ್ಯೂಟ್‌ನ ಕೋವಿಶೀಲ್ಡ್ ಲಸಿಕೆ ಪಡೆಯುತ್ತಿದೆ. ಭಾರತ್ ಬಯೋಟೆಕ್ ಕಂಪನಿಯು 3.5 ಕೋಟಿ ಕೊವ್ಯಾಕ್ಸಿನ್ ಲಸಿಕೆಯನ್ನು ಆಗಸ್ಟ್‌ನಲ್ಲಿ ಪೂರೈಸಲಿದೆ ಎಂದು ಅವರು ಮಾಹಿತಿ ನೀಡಿದರು.

ರಾಜ್ಯಗಳಿಗೆ 15 ದಿನಗಳ ಮುಂಚಿತವಾಗಿ ಲಸಿಕೆ ಲಭ್ಯತೆಯ ಮಾಹಿತಿಯನ್ನು ನೀಡಲಾಗುತ್ತದೆ. ಅದಕ್ಕೆ ಅನುಗುಣವಾಗಿ ಲಸಿಕಾ ಅಭಿಯಾನವನ್ನು ಯೋಜಿಸುವುದು ಅವರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ಬಯಾಲಾಜಿಕಲ್ ಇ ಕಂಪನಿಯು ತನ್ನ ಲಸಿಕೆಯ ಮೂರನೇ ಹಂತದ ಪ್ರಯೋಗವನ್ನು ನಡೆಸುತ್ತಿದೆ ಮತ್ತು ಇದು ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ 7.5 ಕೋಟಿ ಡೋಸ್‌ಗಳೊಂದಿಗೆ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ ಎಂದು ಸಚಿವರು ತಿಳಿಸಿದರು.

‘ಝೈಡಸ್ ಕ್ಯಾಡಿಲಾ ಮತ್ತು ಭಾರತ್ ಬಯೋಟೆಕ್ ಮಕ್ಕಳ ಮೇಲೆ ಲಸಿಕೆ ಪ್ರಯೋಗಗಳನ್ನು ಪ್ರಾರಂಭಿಸಿವೆ. ಅವರ ಪ್ರಯೋಗಗಳು ಯಶಸ್ವಿಯಾಗಲಿ ಎಂದು ನಾನು ನಿರೀಕ್ಷಿಸುತ್ತೇನೆ. ನಮ್ಮ ವಿಜ್ಞಾನಿಗಳನ್ನು ನಾವು ನಂಬಬೇಕಾಗಿದೆ. ನನ್ನ ವಿಜ್ಞಾನಿಗಳು ಮತ್ತು ಸ್ಥಳೀಯ ಕಂಪನಿಗಳನ್ನು ನಾನು ನಂಬುತ್ತೇನೆ’ ಎಂದು ಮಾಂಡವಿಯಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.