ADVERTISEMENT

ಬಾಂಗ್ಲಾ ಪರಿಸ್ಥಿತಿಯನ್ನು ಭಾರತ ಅವಲೋಕಿಸುತ್ತಿದೆ: ರಾಜ್ಯಸಭೆಗೆ ಕೇಂದ್ರ ಮಾಹಿತಿ

ಪಿಟಿಐ
Published 29 ಜನವರಿ 2026, 14:11 IST
Last Updated 29 ಜನವರಿ 2026, 14:11 IST
ಕೀರ್ತಿ ವರ್ಧನ್‌ ಸಿಂಗ್‌
ಕೀರ್ತಿ ವರ್ಧನ್‌ ಸಿಂಗ್‌   

ನವದೆಹಲಿ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮನೆಗಳು ಹಾಗೂ ಪೂಜಾಸ್ಥಳಗಳು ಸೇರಿದಂತೆ ಅವರ ಮೇಲೆ ನಡೆಯುತ್ತಿರುವ ದಾಳಿಯ ಪ್ರಕರಣಗಳ ವರದಿಯನ್ನು ಭಾರತವು ನಿರಂತರವಾಗಿ ಅವಲೋಕಿಸುತ್ತಿದೆ. ಅಲ್ಲಿನ ಅಧಿಕಾರಿಗಳ ಜೊತೆಗಿನ ಮಾತುಕತೆ ವೇಳೆ ಭಾರತವು ಈ ವಿಷಯವನ್ನು ಪ್ರಸ್ತಾಪಿಸಿದೆ ಎಂದು ಕೇಂದ್ರ ಸರ್ಕಾರವು ರಾಜ್ಯಸಭೆಗೆ ಗುರುವಾರ ತಿಳಿಸಿತು. 

ಪ್ರಶ್ನೆಯೊಂದಕ್ಕೆ ಲಿಖಿತವಾಗಿ ಉತ್ತರ ನೀಡಿದ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಕೀರ್ತಿ ವರ್ಧನ್‌ ಸಿಂಗ್‌, ‘ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಈ ಘಟನೆಗಳ ಕುರಿತು ಸಂಪೂರ್ಣವಾಗಿ ತನಿಖೆ ನಡೆಸುತ್ತದೆ. ಅಲ್ಪಸಂಖ್ಯಾತರ ಕೊಲೆ ಹಾಗೂ ಅವರ ವಿರುದ್ಧ ನಡೆದ ಎಲ್ಲಾ ಹಿಂಸಾಚಾರಗಳ ಅಪರಾಧಿಗಳನ್ನು ಯಾವುದೇ ಸಮರ್ಥನೆ ನೀಡದೇ ನ್ಯಾಯಾಂಗದ ಮುಂದೆ ತರುವ ಮೂಲಕ ತನ್ನ ಜವಾಬ್ದಾರಿಯನ್ನು ನಿಭಾಯಿಸುತ್ತದೆ ಎಂದು ಭಾರತವು ನೀರಿಕ್ಷಿಸಿದೆ’ ಎಂದರು. 

‘ಅಲ್ಪಸಂಖ್ಯಾತರ ಸುರಕ್ಷತೆ ಮತ್ತು ಭದ್ರತೆಯ ವಿಷಯವನ್ನು, ಭಾರತ ಸರ್ಕಾರವು ರಾಜಕೀಯ ಹಾಗೂ ರಾಜತಾಂತ್ರಿಕ ಮಟ್ಟದಲ್ಲಿ ಹಲವಾರು ಸಂದರ್ಭಗಳಲ್ಲಿ ನಿರಂತರವಾಗಿ ಎತ್ತಿದೆ’ ಎಂದು ಸಚಿವರು ತಿಳಿಸಿದರು.

ADVERTISEMENT

2025ರ ಏ.4ರಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್‌ ಯೂನಸ್‌ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಈ ವಿಷಯದ ಕುರಿತು ಮಾತನಾಡಿದ್ದಾರೆ ಎಂದರು.  

‘ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ಕೊಲೆ, ದಾಳಿ, ಬೆಂಕಿ ಹಚ್ಚುವಿಕೆ, ಬೆದರಿಕೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವ ಕುರಿತು ವರದಿಗಳನ್ನು ಸರ್ಕಾರ ಗಮನಕ್ಕೆ ತೆಗೆದುಕೊಂಡಿದೆಯೇ’ ಎಂದು ಸಿಪಿಎಂ ಸಂಸದ ಜಾನ್‌ ಬ್ರಿಟ್ಟಾಸ್‌ ಅವರು ಪ್ರಶ್ನಿಸಿದ್ದರು. ಕಳೆದ ಎರಡು ವರ್ಷಗಳಲ್ಲಿ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ರಕ್ಷಣೆ ಕುರಿತು ಭಾರತ ಸರ್ಕಾರವು ಕೈಗೊಂಡಿರುವ ಔಪಚಾರಿಕ ಕ್ರಮಗಳ ಬಗ್ಗೆಯೂ ವಿವರ ಕೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.