ADVERTISEMENT

‘ಭಾರತದ ಭೂ ಪ್ರದೇಶ ಖಾಲಿ ಮಾಡಿ: UNHRC ಸಭೆಯಲ್ಲಿ ಪಾಕ್‌ಗೆ ಭಾರತ ತರಾಟೆ

ಪಿಟಿಐ
Published 24 ಸೆಪ್ಟೆಂಬರ್ 2025, 16:16 IST
Last Updated 24 ಸೆಪ್ಟೆಂಬರ್ 2025, 16:16 IST
   

ಜಿನಿವಾ: ‘ಪಾಕಿಸ್ತಾನವು ಭಯೋತ್ಪಾದಕರಿಗೆ ಆಶ್ರಯ ನೀಡಿ, ತನ್ನ ಸ್ವಂತ ಜನರ ಮೇಲೆ ಬಾಂಬ್‌ ದಾಳಿ ನಡೆಸುವ ಬದಲು ಅಲ್ಲಿನ ಆರ್ಥಿಕ ಸುಧಾರಣೆಗೆ ಗಮನಹರಿಸಲಿ’ ಎಂದು ಭಾರತ ತೀಕ್ಷ್ಣವಾಗಿ ಹೇಳಿದೆ. 

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ (ಯುಎನ್‌ಎಚ್‌ಆರ್‌ಸಿ) 60ನೇ ಅಧಿವೇಶವನದಲ್ಲಿ ಮಾತನಾಡಿದ ಜಿನಿವಾದಲ್ಲಿರುವ ವಿಶ್ವಸಂಸ್ಥೆಯ ಭಾರತದ ಕಾಯಂ ಕಾನ್ಸುಲರ್‌ ಕ್ಷಿತಿಜ್‌ ತ್ಯಾಗಿ, ವಿಶ್ವಸಂಸ್ಥೆಯ ವೇದಿಕೆಯಲ್ಲಿ ಭಾರತದ ವಿರುದ್ಧ ಆಧಾರ ರಹಿತ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿದ ಪಾಕ್‌ ನಿಯೋಗವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. 

‘ವಿರೋಧಾಭಾಸವನ್ನೇ ಸಾರುವ ಪಾಕ್‌ ನಿಯೋಗವು ವಿಶ್ವಸಂಸ್ಥೆಯ ವೇದಿಕೆಯನ್ನು ಭಾರತದ ವಿರುದ್ಧ ಆಧಾರ ರಹಿತ  ಆರೋಪ ಮಾಡಲು ದುರ್ಬಳಕೆ ಮಾಡಿಕೊಳ್ಳುತ್ತಿದೆ’ ಎಂದು ತ್ಯಾಗಿ ಆಕ್ಷೇಪ ವ್ಯಕ್ತಪಡಿಸಿದರು. ವಾರದ ಹಿಂದೆ ಪಾಕಿಸ್ತಾನದ ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದಲ್ಲಿ 24 ಜನರನ್ನು ಬಲಿ ಪಡೆದ ಸ್ಫೋಟವನ್ನು ನಿರ್ದಿಷ್ಟವಾಗಿ ಹೆಸರಿಸದೆ, ‘ಪಾಕ್‌ ಮೊದಲು ತನ್ನ ದೇಶದ ಆರ್ಥಿಕ ಸ್ಥಿತಿ ಮತ್ತು ಅಲ್ಲಿನ ಮಾನವ ಹಕ್ಕುಗಳ ಸುಧಾರಣೆಗೆ ಗಮನ ಹರಿಸಲಿ’ ಎಂದು ತಿರುಗೇಟು ನೀಡಿದರು. 

ADVERTISEMENT

ಪಾಕ್‌ ಆಕ್ರಮಿತ ಕಾಶ್ಮೀರವನ್ನು ಉಲ್ಲೇಖಿಸಿ, ‘ನೀವು ನಮ್ಮ ಭೂಪ್ರದೇಶವನ್ನು ಅಪೇಕ್ಷಿಸುವ ಬದಲು, ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಭಾರತದ ಭೂ ಪ್ರದೇಶವನ್ನು ಖಾಲಿ ಮಾಡುವುದೇ ಒಳ್ಳೆಯದು’ ಎಂದು ಅವರು ಎಚ್ಚರಿಸಿದರು.

ಪಾಕಿಸ್ತಾನವು ಭಯೋತ್ಪಾದನೆಯನ್ನು ರಫ್ತು ಮಾಡುವುದರಿಂದ ದೂರ ಇದ್ದು, ಕುಸಿದಿರುವ ಆರ್ಥಿಕತೆಯನ್ನು ಮೇಲೆತ್ತುವ ಕೆಲಸವನ್ನು ಮೊದಲು ಮಾಡಲಿ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.