ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ
ಗುವಾಹಟಿ: 1971ರಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಐತಿಹಾಸಿಕ ಗೆಲುವು ಸಾಧಿಸಿತ್ತು. ಯುದ್ಧದ ಬಳಿಕ ಆಗಿನ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರು ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ವಿಫಲರಾದರು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಭಾನುವಾರ ಆರೋಪಿಸಿದ್ದಾರೆ.
ಇತ್ತೀಚೆಗೆ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಪಾಕಿಸ್ತಾನ ಮತ್ತು ಭಾರತದ ನಡುವೆ ಕದನ ವಿರಾಮ ಒಪ್ಪಂದ ನಡೆದಿದೆ. ಮೋದಿ ನಾಯಕತ್ವದ ಬಗ್ಗೆ ಹಲವರು ಪ್ರಶ್ನಿಸಿದ್ದಾರೆ.
ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಶರ್ಮಾ, ಮೋದಿ ನಾಯಕತ್ವದ ಬಗ್ಗೆ ಪ್ರಶ್ನೆ ಎತ್ತುವವರು, ಇಂದಿರಾ ಗಾಂಧಿ ಅವರು 1971ರ ಯುದ್ಧದ ಬಳಿಕ ಪರಿಸ್ಥಿತಿ ನಿರ್ವಹಿಸುವಲ್ಲಿ ವಿಫಲರಾದರು ಎಂಬುವುದನ್ನು ಅರ್ಥೈಸಿಕೊಳ್ಳಬೇಕು ಎಂದು ಶರ್ಮಾ ಹೇಳಿದ್ದಾರೆ.
'ಬಾಂಗ್ಲಾದೇಶದ ಸೃಷ್ಟಿಯ ಪುರಾಣ: ಒಂದು ಕಾರ್ಯತಂತ್ರದ ವಿಜಯ, ಮತ್ತೊಂದು ರಾಜತಾಂತ್ರಿಕ ಮೂರ್ಖತನ' ಎಂದು ಪೋಸ್ಟ್‌ನಲ್ಲಿ ಶರ್ಮಾ ಬರೆದುಕೊಂಡಿದ್ದಾರೆ.
1971ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಯುದ್ಧದ ಬಳಿಕ ಬಾಂಗ್ಲಾದೇಶ ಉದಯಕ್ಕೆ ಕಾರಣವಾಯಿತು. ಆದರೆ ಈ ವೇಳೆ ಇಂದಿರಾ ಗಾಂಧಿ ರಾಜಕೀಯ ಕಾರ್ಯತಂತ್ರ ರೂಪಿಸುವಲ್ಲಿ ವಿಫಲವಾದರು. ಭಾರತೀಯ ಸೈನಿಕರೂ ಐತಿಹಾಸಿಕ ಗೆಲುವು ಸಾಧಿಸಿದ್ದರೂ ಗಾಂಧಿ ಅವರು ನಿರ್ಣಾಯಕ ನಿರ್ಧಾರಗಳನ್ನು ಕೈಗೊಳ್ಳಲಿಲ್ಲ. ಇದರ ಪರಿಣಾಮವಾಗಿ, ಅಸ್ಸಾಂ, ಬಂಗಾಳ ಮತ್ತು ಈಶಾನ್ಯ ರಾಜ್ಯಗಳು ಅನಿಯಂತ್ರಿತ ಜನಸಂಖ್ಯಾ ಬದಲಾವಣೆಯನ್ನು ಎದುರಿಸುತ್ತಿವೆ. ಇದು ಸಾಮಾಜಿಕ ಅಶಾಂತಿ ಮತ್ತು ರಾಜಕೀಯ ಅಸ್ಥಿರತೆಯನ್ನು ಹುಟ್ಟುಹಾಕುತ್ತಿದೆ. ಭಾರತವು ಚಿತ್ತಗಾಂಗ್ ಬಂದರಿಗೆ ಪ್ರವೇಶವನ್ನು ಪಡೆದುಕೊಂಡಿಲ್ಲ ಎಂದು ಶರ್ಮಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ಯುದ್ಧದ ಬಳಿಕ ಗಾಂಧಿ ಅವರು ಯಶಸ್ವಿಯಾಗಿ ಪರಿಸ್ಥಿತಿಯನ್ನು ನಿರ್ವಹಿಸಿದ್ದರೆ ಇಂದೂ ಇಂತಹ ಘಟನೆಗಳು ಸಂಭವಿಸುತ್ತಿರಲಿಲ್ಲ ಎಂದು ಶರ್ಮಾ ಕಿಡಿಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.