India to resume postal services to US from October 15
ನವದೆಹಲಿ: ಮಂಗಳವಾರ(ಅ.14) ಬಿಡುಗಡೆಯಾದ ಅಧಿಕೃತ ಹೇಳಿಕೆಯ ಪ್ರಕಾರ, ಇಂಡಿಯಾ ಪೋಸ್ಟ್ ಅಕ್ಟೋಬರ್ 15ರಿಂದ ಅಮೆರಿಕಕ್ಕೆ ಎಲ್ಲ ವರ್ಗಗಳ ಅಂತರರಾಷ್ಟ್ರೀಯ ಅಂಚೆ ಸೇವೆಗಳನ್ನು ಪುನರಾರಂಭಿಸಲಿದೆ.
ಅಮೆರಿಕದ ಕಸ್ಟಮ್ಸ್ ಮತ್ತು ಗಡಿ ರಕ್ಷಣೆ(ಸಿಬಿಪಿ) ಮಾರ್ಗಸೂಚಿಗಳ ಪ್ರಕಾರ, ಭಾರತದಿಂದ ಅಮೆರಿಕಕ್ಕೆ ಅಂಚೆ ಸಾಗಣೆಯ ಮೇಲಿನ ಕಸ್ಟಮ್ಸ್ ಸುಂಕವು ಹೊಸ ಸುಂಕ ನಿಯಮದ ಅಡಿಯಲ್ಲಿ ಘೋಷಿತ ಮೌಲ್ಯದ ಶೇ 50ರಷ್ಟು ಅನ್ವಯಿಸುತ್ತದೆ ಎಂದು ಅಂಚೆ ಇಲಾಖೆ ತಿಳಿಸಿದೆ.
‘ಅಕ್ಟೋಬರ್ 15ರಿಂದ ಜಾರಿಗೆ ಬರುವಂತೆ ಅಮೆರಿಕದ ಎಲ್ಲ ವರ್ಗಗಳ ಅಂತರರಾಷ್ಟ್ರೀಯ ಅಂಚೆ ಸೇವೆಗಳನ್ನು ಪುನರಾರಂಭಿಸುವುದಾಗಿ ಘೋಷಿಸಲು ಅಂಚೆ ಇಲಾಖೆ ಸಂತೋಷಪಡುತ್ತದೆ’ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಹೊಸ ಆಮದು ಸುಂಕ ಸಂಗ್ರಹಕ್ಕೆ ಅಮೆರಿಕದ ಕಸ್ಟಮ್ಸ್ ಮತ್ತು ಗಡಿ ರಕ್ಷಣೆ(ಸಿಬಿಪಿ) ವಿಭಾಗವು ಆಗಸ್ಟ್ 22ರಂದು ಪರಿಚಯಿಸಿದ ಹೊಸ ನಿಯಂತ್ರಕ ನಿಯಮಗಳಿಂದಾಗಿ ಅಂಚೆ ಸೇವೆ ಅಮಾನತುಗೊಳಿಸುವಿಕೆ ಅಗತ್ಯವಾಗಿತ್ತು ಎಂದು ಇಂಡಿಯಾ ಪೋಸ್ಟ್ ಹೇಳಿದೆ.
ಕೊರಿಯರ್ ಅಥವಾ ವಾಣಿಜ್ಯ ಸರಕುಗಳಿಗೆ ಭಿನ್ನವಾಗಿ, ಅಂಚೆ ಮೇಲೆ ಯಾವುದೇ ಹೆಚ್ಚುವರಿ ಮೂಲ ಅಥವಾ ಉತ್ಪನ್ನ-ನಿರ್ದಿಷ್ಟ ಸುಂಕಗಳನ್ನು ವಿಧಿಸಲಾಗುವುದಿಲ್ಲ ಎಂದು ಅದು ಹೇಳಿದೆ.
‘ಈ ಅನುಕೂಲಕರ ಸುಂಕ ರಚನೆಯು ರಫ್ತುದಾರರಿಗೆ ಒಟ್ಟಾರೆ ವೆಚ್ಚದ ಹೊರೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಅಂಚೆ ಚಾನಲ್ ಅನ್ನು MSMEಗಳು, ಕುಶಲಕರ್ಮಿಗಳು, ಸಣ್ಣ ವ್ಯಾಪಾರಿಗಳು ಮತ್ತು ಇ-ಕಾಮರ್ಸ್ ರಫ್ತುದಾರರಿಗೆ ಹೆಚ್ಚು ಕೈಗೆಟುಕುವ ಮತ್ತು ಸ್ಪರ್ಧಾತ್ಮಕ ಲಾಜಿಸ್ಟಿಕ್ಸ್ ಆಯ್ಕೆಯನ್ನಾಗಿ ಮಾಡುತ್ತದೆ’ಎಂದು ಹೇಳಿಕೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.