ADVERTISEMENT

ಕೊರೊನಾ ವೈರಸ್‌ ಭೀತಿ: ಚೀನಾದಿಂದ ಭಾರತೀಯರ ಕರೆತರಲು ಸಜ್ಜು

ಚೀನಾದ ವುಹಾನ್‌ನಲ್ಲಿ ಹಬ್ಬಿರುವ ಕೊರೊನಾ ವೈರಸ್‌ ಭೀತಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2020, 1:13 IST
Last Updated 28 ಜನವರಿ 2020, 1:13 IST
   

ನವದೆಹಲಿ: ಕೊರೊನಾ ವೈರಸ್‌ ಪೀಡಿತ ಚೀನಾದಿಂದ ಭಾರತೀಯರನ್ನು ಕರೆತರಲು ಮುಂಬೈನಲ್ಲಿ ಏರ್ ಇಂಡಿಯಾದ ಬೋಯಿಂಗ್‌ 747 ವಿಮಾನವನ್ನು ಸಜ್ಜಾಗಿ ಇರಿಸಲಾಗಿದೆ.

ಚೀನಾದ ವುಹಾನ್‌ ಮತ್ತು ಹುಬೇ ಪ್ರಾಂತ್ಯದಿಂದ 250 ಭಾರತೀಯರನ್ನು ಕರೆತರಲು ಕೇಂದ್ರ ಚಿಂತನೆ ನಡೆಸಿದೆ.ವುಹಾನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಮತ್ತು ಇತರೆಡೆ ಇರುವ ಭಾರತೀಯರ ಜೊತೆಗೆ ಅಲ್ಲಿನ ಭಾರತೀಯ ರಾಯಭಾರಿ ಕಚೇರಿ ಸಂಪರ್ಕದಲ್ಲಿದೆ. ಇವರನ್ನು ಒಂದೆಡೆ ಸೇರಿಸುವ ಕೆಲಸ ಶೀಘ್ರವೇ ಆರಂಭವಾಗಲಿದ್ದು, ಬಳಿಕ ವಿಮಾನದಲ್ಲಿ ತ್ವರಿತವಾಗಿ ಕರೆತರಲಾಗುವುದು ಎಂದು ಮೂಲಗಳು ತಿಳಿಸಿವೆ.

ಚೀನಾ ಸರ್ಕಾರದ ಜೊತೆಗೆ ರಾಯಭಾರ ಕಚೇರಿ ಮೂಲಕ ವಿದೇಶಾಂಗ ಸಚಿವಾಲಯವು ಸಂಪರ್ಕದಲ್ಲಿದೆ. ದೇಶದ ನಾಗರಿಕರನ್ನು ಸುರಕ್ಷಿತವಾಗಿ ಕರೆತರಲು ವಿಮಾನ ಕಳುಹಿಸಲು ಸರ್ಕಾರದ ಅನುಮತಿ ಕೋರಿದೆ. ಅಮೆರಿಕ ಮತ್ತು ಫ್ರಾನ್ಸ್‌ ಈ ನಿಟ್ಟಿನಲ್ಲಿ ಈಗಾಗಲೇ ಕ್ರಮ ಕೈಗೊಂಡಿವೆ.

ADVERTISEMENT

ಈ ನಡುವೆ, ಹುಬೇ ಪ್ರಾಂತ್ಯದ ವಿವಿಧೆಡೆ ನೆಲೆಸಿರುವ ಭಾರತೀಯರು ತಮ್ಮ ಬಳಿ ಪಾಸ್‌ಪೋರ್ಟ್‌ ಇಲ್ಲದಿದ್ದರೆ ನಿಯೋಜಿತ ಅಧಿಕಾರಿಗಳಿಗೆ ಮಾಹಿತಿ ನೀಡಿ ದಾಖಲೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ವುಹಾನ್‌ ಹಾಗೂ ಇತರೆಡೆ ಇರುವ ಭಾರತೀಯ ನಾಗರಿಕರು ಆಹಾರ, ನೀರು ಅಥವಾ ಅಗತ್ಯ ವಸ್ತುಗಳ ಕೊರತೆ ಎದುರಿಸು
ತ್ತಿದ್ದು, ತಾವಿರುವ ನಿರ್ದಿಷ್ಟ ಸ್ಥಳವನ್ನು ಉಲ್ಲೇಖಿಸಿ ಮಾಹಿತಿ ನೀಡಿದರೆ, ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚಿಸಿ ಸೌಲಭ್ಯ ಒದಗಿಸಲು ಕ್ರಮವಹಿಸಲಾಗುವುದು ಎಂದು ರಾಯಭಾರ ಕಚೇರಿ ಪ್ರಕಟಿಸಿದೆ.

ಇನ್ನೂ ಬಾರದ ವರದಿ

ಬೆಂಗಳೂರು: ಚೀನಾ ಪ್ರವಾಸ ಮುಗಿಸಿಕೊಂಡು ಬಂದಿರುವ ಇಬ್ಬರು ಭಾರತೀಯರಲ್ಲಿಕೊರೊನಾ ವೈರಸ್ ಸೋಂಕು ಹರಡಿರುವ ಶಂಕೆ ವ್ಯಕ್ತವಾಗಿದ್ದರಿಂದ ಅವರ ರಕ್ತದ ಮಾದರಿಯನ್ನು ಹೆಚ್ಚಿನ ಪರೀಕ್ಷೆಗಾಗಿ ಪುಣೆಯ ರಾಷ್ಟ್ರೀಯ ರೋಗಸೂಕ್ಷ್ಮಾಣು (ವೈರಾಲಜಿ) ಅಧ್ಯಯನ ಸಂಸ್ಥೆಗೆ ಕಳುಹಿಸಲಾಗಿದೆ. ಆದರೆ, ವರದಿ ಇನ್ನೂ ಬಂದಿಲ್ಲ.

ಚೀನಾ ಪ್ರವಾಸ ಮುಗಿಸಿ, ಜ. 18ರಂದು ನಗರಕ್ಕೆ ವಾಪಸ್ಸಾಗಿದ್ದ ಈ ಇಬ್ಬರ ಆರೋಗ್ಯದಲ್ಲೂ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಭಾನುವಾರ ರಾತ್ರಿ ನಗರದ ರಾಜೀವ್ ಗಾಂಧಿ ಹೃದ್ರೋಗ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ತಪಾಸಣೆ ಮುಂದುವರಿಕೆ: ವಿದೇಶಗಳಿಂದ ಬರುವ ಪ್ರವಾಸಿಗರು ಹಾಗೂ ವಿದೇಶಗಳಿಗೆ ಹೋಗಿ ಬರುವ ಭಾರತೀಯರನ್ನು ಆರೋಗ್ಯ ಇಲಾಖೆ ಅಧಿಕಾರಿಗಳೇ ತಪಾಸಣೆಗೆ ಒಳಪಡಿಸುತ್ತಿದ್ದಾರೆ. ಕೆಮ್ಮು, ನೆಗಡಿ, ಉಸಿರಾಟದ ಸಮಸ್ಯೆ ಇರುವವರಿಗೆ ಸಹಾಯ ಕೇಂದ್ರದಲ್ಲಿ ತಪಾಸಣೆ ಮಾಡಿಸಿಕೊಳ್ಳಲು ಸೂಚಿಸಲಾಗುತ್ತಿದೆ.

ಮನವಿ:ಜ.1ರಿಂದ ಈಚೆಗೆ ಚೀನಾಕ್ಕೆ ಭೇಟಿ

ನೀಡಿದ ವ್ಯಕ್ತಿಗಳು ಉಸಿರಾಟದ ತೊಂದರೆ, ಶೀತ, ನೆಗಡಿ, ಕೆಮ್ಮು, ಗಂಟಲು ಕೆರೆತದಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡರೆ ಕೂಡಲೇ ಹತ್ತಿರದ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಬೇಕು. ತಪಾಸಣೆ ವೇಳೆ ಕಡ್ಡಾಯವಾಗಿ ಚೀನಾಗೆ ಭೇಟಿ ನೀಡಿರುವುದನ್ನು
ವೈದ್ಯರಿಗೆ ತಿಳಿಸಬೇಕು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.

ಕೊರೊನಾ ವೈರಸ್ ಸಹಾಯವಾಣಿಯನ್ನು ಆರಂಭಿಸಿದ್ದು, ಸೋಂಕಿನ ಲಕ್ಷಣಗಳು ಕಾಣಿಸಿಕೊಂಡವರು ಕರೆ ಮಾಡಿ ಮಾಹಿತಿ ಪಡೆಯಬಹುದು. ಸಹಾಯವಾಣಿ ಸಂಖ್ಯೆ: + 91-11-23978046.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.