ADVERTISEMENT

‘ಹುಲಿ ಸಂರಕ್ಷಣೆ: ನಾಯಕತ್ವ ವಹಿಸಲು ಭಾರತ ಸಿದ್ಧ’: ಪ್ರಕಾಶ್ ಜಾವಡೇಕರ್ ಅಭಿಮತ

ಅಂತರರಾಷ್ಟ್ರೀಯ ಹುಲಿ ದಿನ

ಪಿಟಿಐ
Published 28 ಜುಲೈ 2020, 8:39 IST
Last Updated 28 ಜುಲೈ 2020, 8:39 IST
ಪಿಲಿಕುಳ ನಿಸರ್ಗಧಾಮದ ಜೈವಿಕ ಉದ್ಯಾನದಲ್ಲಿ ಹುಲಿ-ಸಂಗ್ರಹ ಚಿತ್ರ
ಪಿಲಿಕುಳ ನಿಸರ್ಗಧಾಮದ ಜೈವಿಕ ಉದ್ಯಾನದಲ್ಲಿ ಹುಲಿ-ಸಂಗ್ರಹ ಚಿತ್ರ   

ನವದೆಹಲಿ: ಹುಲಿ ಸಂರಕ್ಷಿತ ಪ್ರದೇಶಗಳ ನಿರ್ವಹಣೆ ವಿಚಾರದಲ್ಲಿ ಇತರ ದೇಶಗಳ ಜೊತೆ ಕೆಲಸ ಮಾಡಲು ಹಾಗೂ ನಾಯಕತ್ವ ವಹಿಸಲು ಭಾರತ ಸಿದ್ಧವಿದೆ ಎಂದು ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಅವರು ಮಂಗಳವಾರ ತಿಳಿಸಿದ್ದಾರೆ.

‘ಅಂತರರಾಷ್ಟ್ರೀಯ ಹುಲಿ ದಿನ’ದ ಅಂಗವಾಗಿ (ಜುಲೈ 29) ಮಾತನಾಡಿದ ಅವರು, ವಿಶ್ವ ಜೀವವೈವಿಧ್ಯತೆಯಲ್ಲಿ ಜಾಗತಿಕವಾಗಿ ಶೇ 8ರಷ್ಟು ಪಾಲು ಹೊಂದಿರುವ ದೇಶದ ಸಾಧನೆ ಬಗ್ಗೆ ಹೆಮ್ಮೆಯಿದೆ.1973ರಲ್ಲಿ ಕೇವಲ 9 ಇದ್ದ ಹುಲಿ ಸಂರಕ್ಷಿತ ಪ್ರದೇಶಗಳ ಸಂಖ್ಯೆ ಈಗ 50ಕ್ಕೆ ಏರಿಕೆಯಾಗಿದೆ. ಈ ಎಲ್ಲ ಮೀಸಲು ಪ್ರದೇಶಗಳೂ ನಿರ್ವಹಣೆ ವಿಚಾರದಲ್ಲಿ ಅತ್ಯುತ್ತಮವಾಗಿವೆ’ ಎಂದರು.

‘ಹುಲಿಗಳ ಸಂರಕ್ಷಣೆಗಾಗಿ ಕೆಲಸ ಮಾಡಲು ದೇಶ ಬದ್ಧವಾಗಿದೆ. ಇತರ 12 ಹುಲಿ ಸಂರಕ್ಷಿತ ದೇಶಗಳ ಜೊತೆ ತರಬೇತಿ, ಸಾಮರ್ಥ್ಯ ಹೆಚ್ಚಳ, ಮೀಸಲು ಪ್ರದೇಶಗಳ ನಿರ್ವಹಣೆ ವಿಚಾರಗಳನ್ನು ಹಂಚಿಕೊಳ್ಳಲು ಸಿದ್ಧ’ ಎಂದರು.

ADVERTISEMENT

ಜಗತ್ತಿನಲ್ಲಿ 13 ದೇಶಗಳಲ್ಲಿ ಹುಲಿ ವ್ಯಾಪ್ತಿ ಇದೆ. ಭಾರತ, ಬಾಂಗ್ಲಾದೇಶ, ಭೂತಾನ್, ಕಾಂಬೊಡಿಯಾ, ಚೀನಾ, ಇಂಡೊನೇಷ್ಯಾ, ಲಾವೊ, ಮಲೇಷ್ಯಾ, ಮ್ಯಾನ್ಮಾರ್, ನೇಪಾಳ, ರಷ್ಯಾ, ಥಾ‌ಯ್ಲೆಂಡ್, ವಿಯಟ್ನಾಂ ದೇಶಗಳಲ್ಲಿ ಹುಲಿ ಸಂತತಿ ಇದೆ.

ಹುಲಿ ಸಂರಕ್ಷಣೆಗೆ ಭಾರತದ ಕೊಡುಗೆ ಅಗಾಧವಾದುದು ಎಂದು ಪರಿಸರ ಖಾತೆ ರಾಜ್ಯ ಸಚಿವ ಬಬುಲ್ ಸುಪ್ರಿಯೊ ಹೇಳಿದರು. ಇದನ್ನು ಗಿನ್ನಿಸ್ ದಾಖಲೆ ಕೂಡ ಪರಿಗಣಿಸಿದೆ ಎಂದರು.

ವಿಶ್ವ ಹುಲಿ ದಿನದ ಅಂಗವಾಗಿ ದೇಶದ 50 ಹುಲಿ ಮೀಸಲು ಪ್ರದೇಶಗಳ ಈಗಿನ ಸ್ಥಿತಿಗತಿಯ ವರದಿ ಬಿಡುಗಡೆಯಾಯಿತು. ಇದರ ಪ್ರಕಾರ ಮಧ್ಯಪ್ರದೇಶದಲ್ಲಿ ಹೆಚ್ಚು ಹುಲಿಗಳಿದ್ದು, ನಂತರದ ಸ್ಥಾನದಲ್ಲಿ ಕರ್ನಾಟಕ ಇದೆ. 2019ರ ದತ್ತಾಂಶಗಳ ಪ್ರಕಾರ, ದೇಶದಲ್ಲಿ 2,967 ಹುಲಿಗಳಿವೆ. 2006ರಲ್ಲಿ 1,411 ಹುಲಿಗಳಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.