ADVERTISEMENT

ಧಾರ್ಮಿಕ ದೌರ್ಜನ್ಯ: ಅಮೆರಿಕದ ವರದಿ ತಿರಸ್ಕರಿಸಿದ ಭಾರತ

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 17:43 IST
Last Updated 11 ಜೂನ್ 2020, 17:43 IST
   

ನವದೆಹಲಿ:ಭಾರತದಲ್ಲಿ ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಮತ್ತು ತಾರತಮ್ಯ ‘ಬಹಳ ಕಳವಳಕಾರಿ’ ಎಂದು ‘ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ’ದ ಅಮೆರಿಕದ ರಾಯಭಾರಿ ಸಾಮ್ಯುಯೆಲ್‌ ಬ್ರೌನ್‌ಬ್ಯಾಕ್‌ ಹೇಳಿದ್ದಾರೆ.

ಆದರೆ, ಈ ಹೇಳಿಕೆಯನ್ನು ಭಾರತವು ತಿರಸ್ಕರಿಸಿದೆ.

‘ಭಾರತದಲ್ಲಿ ನಡೆಯುತ್ತಿರುವುದರ ಬಗ್ಗೆ ಬಹಳ ಕಳವಳ ಇದೆ. ಈ ದೇಶವು ಎಲ್ಲ ಧರ್ಮಗಳ ಬಗ್ಗೆ ಸಹಿಷ್ಣುತೆ ಮತ್ತು ಗೌರವದ ಚರಿತ್ರೆಯನ್ನು ಹೊಂದಿತ್ತು’ ಎಂದು ಬ್ರೌನ್‌ಬ್ಯಾಕ್‌ ಹೇಳಿದ್ದಾರೆ.ಜಮ್ಮು ಮತ್ತು ಕಾಶ್ಮೀರದ ವಿಶೇಷಾಧಿಕಾರ ರದ್ದತಿ ಮತ್ತು ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿಗೆ ಸಂಬಂಧಿಸಿದಂತೆ ಅಮೆರಿಕದ ವಿದೇಶಾಂಗ ಇಲಾಖೆಯು ವರದಿಯೊಂದನ್ನು ಪ್ರಕಟಿಸಿದ ಬಳಿಕ ಬ್ರೌನ್‌ಬ್ಯಾಕ್‌ ಅವರು ಈ ಹೇಳಿಕೆ ನೀಡಿದ್ದಾರೆ.

ADVERTISEMENT

ಈ ವರದಿಯು ಅಮೆರಿಕದ ವಿದೇಶಾಂಗ ಇಲಾಖೆಯ ಆಂತರಿಕ ದಾಖಲೆ ಎಂದು ಭಾರತ ಹೇಳಿದೆ.ಸಾಂವಿಧಾನಿಕ ರಕ್ಷಣೆ ಇರುವ ಭಾರತದ ಪೌರರ ಬಗ್ಗೆ ಈ ರೀತಿಯ ತೀರ್ಮಾನಗಳಿಗೆ ಬರುವ ಹಕ್ಕು ವಿದೇಶದ ಯಾವುದೇ ಸಂಸ್ಥೆಗೆ ಇಲ್ಲ ಎಂದಿದೆ.

ಅಮೆರಿಕದ ವಿದೇಶಾಂಗ ಸಚಿವ ಮೈಕ್‌ ಪಾಂಪಿಯೊ ಅವರು ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವರದಿಯನ್ನು ಬುಧವಾರ ಬಿಡುಗಡೆ ಮಾಡಿದ್ದರು. ಧಾರ್ಮಿಕ ಅಲ್ಪಸಂಖ್ಯಾತರು, ಶೋಷಿತ ವರ್ಗಗಳ ಮೇಲಿನ ಗುಂಪು ದಾಳಿಯನ್ನು ತಡೆಯುವಲ್ಲಿ ಸರ್ಕಾರ ಕೆಲವೊಮ್ಮೆ ವಿಫಲವಾಗಿದೆ ಎಂದು ಈ ವರದಿಯಲ್ಲಿ ಹೇಳಲಾಗಿತ್ತು. ಸರ್ಕಾರದ ಟೀಕಾಕಾರರ ಮೇಲೆ ದಾಳಿ ನಡೆದಿರುವುದನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

‘ಬಿಜೆಪಿ ಸೇರಿದಂತೆ, ಹಿಂದುತ್ವವಾದಿ ಪಕ್ಷಗಳ ಮುಖಂಡರು ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ಬಹಿರಂಗವಾಗಿ ನೀಡಿದ್ದಾರೆ ಅಥವಾ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿದ್ದಾರೆ. ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ವರ್ಷವಿಡೀ (2019) ಹಲ್ಲೆಗಳು ನಡೆದಿವೆ. ಇವರು ದನ ಕೊಂದಿದ್ದಾರೆ ಅಥವಾ ದನದ ಮಾಂಸದ ವ್ಯಾಪಾರ ಮಾಡಿದ್ದಾರೆ ಎಂಬ ವದಂತಿಗಳ ಆಧಾರದಲ್ಲಿ ಹಲ್ಲೆಗಳು ನಡೆದಿವೆ. ಹಲ್ಲೆ ನಡೆಸಿದ ‘ಗೋರಕ್ಷಕರ’ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ಹಲವು ಬಾರಿ ವಿಫಲವಾಗಿದೆ’ ಎಂದು ವರದಿಯಲ್ಲಿ ಹೇಳಲಾಗಿತ್ತು.

**

ಇನ್ನಷ್ಟು ಸಂಕಷ್ಟ ಎದುರಾಗಬಹುದು. ಭಾರತದಲ್ಲಿ ಉನ್ನತ ಹಂತದಲ್ಲಿ ಅಂತರ ಧರ್ಮೀಯ ಸಂವಾದ ಆರಂಭವಾಗಬಹುದು ಎಂಬುದು ನಮ್ಮ ನಿರೀಕ್ಷೆ.
-ಸಾಮ್ಯುಯೆಲ್‌ ಬ್ರೌನ್‌ಬ್ಯಾಕ್‌, ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ರಾಯಭಾರಿ

**

ಭಾರತದಲ್ಲಿ ಸದೃಢವಾದ ಸಾರ್ವಜನಿಕ ಸಂವಾದ ವ್ಯವಸ್ಥೆ ಇದೆ. ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಾಂವಿಧಾನಿಕ ರಕ್ಷಣೆ ಇದೆ, ಕಾನೂನು ವ್ಯವಸ್ಥೆ ಇದೆ.
-ಅನುರಾಗ್‌ ಶ್ರೀವಾಸ್ತವ, ವಿದೇಶಾಂಗ ಸಚಿವಾಲಯದ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.