ADVERTISEMENT

ಪಾಕ್‌ ಸೇನಾಡಳಿತದ ಪರಂಪರೆ ನೆನಪಿಸಿದ ಭಾರತ

ಕಾಮನ್ವೆಲ್ತ್‌ ಸಮಾವೇಶದಲ್ಲಿಯೂ ಕಾಶ್ಮೀರ ವಿಚಾರ ಪ್ರಸ್ತಾಪದ ಪ್ರಯತ್ನಕ್ಕೆ ತಿರುಗೇಟು

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 19:45 IST
Last Updated 29 ಸೆಪ್ಟೆಂಬರ್ 2019, 19:45 IST
ರೂಪಾ ಗಂಗೂಲಿ
ರೂಪಾ ಗಂಗೂಲಿ   

ನವದೆಹಲಿ: ಉಗಾಂಡದಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್‌ ಸಂಸದೀಯ ಸಮಾವೇಶದಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪಿಸುವ ಪಾಕಿಸ್ತಾನದ ಪ್ರಯತ್ನಕ್ಕೆ ಭಾರತ ಬಲವಾದ ತಿರುಗೇಟು ನೀಡಿದೆ. ಪಾಕಿಸ್ತಾನ ಅಪಪ್ರಚಾರ ಮಾಡುತ್ತಿದೆ ಎಂದು ಭಾರತ ಹೇಳಿದೆ. ಜತೆಗೆ, ಪಾಕಿಸ್ತಾನದ ಸೇನಾ ಆಳ್ವಿಕೆಯ ಹಿನ್ನೆಲೆಯನ್ನು ನೆನಪಿಸಿದೆ.

ಕಾಶ್ಮೀರದಲ್ಲಿ ಭಾರಿ ಸಂಖ್ಯೆಯಲ್ಲಿ ಯೋಧರನ್ನು ನಿಯೋಜಿಸಲಾಗಿದೆ ಎಂದು ಪಾಕಿಸ್ತಾನದ ನಿಯೋಗವು ಹೇಳಿದಾಗ, ಬಿಜೆಪಿ ಸಂಸದೆ ರೂಪಾ ಗಂಗೂಲಿ ಅವರು ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಪಾಕಿಸ್ತಾನಕ್ಕೆ ಸೇನಾ ಆಳ್ವಿಕೆಯ ಪರಂಪರೆಯೇ ಇದೆ. 33 ವರ್ಷ ಅಲ್ಲಿ ಸೇನೆಯ ಆಡಳಿತ ಇತ್ತು ಎಂದು ರೂಪಾ ಹೇಳಿದ್ದಾಗಿ ಲೋಕಸಭಾ ಕಾರ್ಯಾಲಯವು ಪ್ರಕಟಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ADVERTISEMENT

ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಅವರ ನೇತೃತ್ವದಲ್ಲಿ ಭಾರತದ ನಿಯೋಗವು ಈ ಸಮಾವೇಶದಲ್ಲಿ ಭಾಗವಹಿಸುತ್ತಿದೆ. ನಿಯೋಗದಲ್ಲಿ ರೂಪಾ ಅವರಲ್ಲದೆ, ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಅಧಿರ್‌ ರಂಜನ್‌ ಚೌಧರಿ, ಎಲ್‌. ಹನುಮಂತಯ್ಯ, ಅಪರಾಜಿತಾ ಸಾರಂಗಿ ಮತ್ತು ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಸ್ನೇಹಲತಾ ಶ್ರೀವಾಸ್ತವ ಅವರಿದ್ದಾರೆ.

ಲಭ್ಯ ಇರುವ ಎಲ್ಲ ಅಂತರರಾಷ್ಟ್ರೀಯ ವೇದಿಕೆಗಳಲ್ಲಿಯೂ ಕಾಶ್ಮೀರ ವಿಚಾರ ಪ್ರಸ್ತಾಪಿಸುವ ಪ್ರಯತ್ನವನ್ನು ಪಾಕಿಸ್ತಾನ ಮಾಡುತ್ತಲೇ ಬಂದಿದೆ. ಆದರೆ, ಭಾರತವು ಅಷ್ಟೇ ಪ್ರಬಲವಾದ ಪ್ರತಿರೋಧ ಒಡ್ಡುತ್ತಿದೆ.

ಸಂಸತ್ತಿನ ಸ್ಪೀಕರ್‌ಗಳ ಸಭೆಯು ಇತ್ತೀಚೆಗೆ ಕಜಕಸ್ತಾನದಲ್ಲಿ ನಡೆದಿತ್ತು. ಅಲ್ಲಿಯೂ ಪಾಕಿಸ್ತಾನವು ಕಾಶ್ಮೀರ ವಿಚಾರ ಪ್ರಸ್ತಾಪ ಮಾಡಿತ್ತು. ಆದರೆ, ರಾಜ್ಯಸಭೆಯ ಉಪಸಭಾಪತಿ ಹರಿವಂಶ್‌ ಅವರು ಇದಕ್ಕೆ ಪ್ರಬಲ ತಿರುಗೇಟು ನೀಡಿದ್ದರು.

ಮಾಲ್ದೀವ್ಸ್‌ನಲ್ಲಿ ನಡೆದ ದಕ್ಷಿಣ ಏಷ್ಯಾ ಸ್ಪೀಕರ್‌ಗಳ ಸಮಾವೇಶದಲ್ಲಿಯೂ ಇದು ಪುನರಾವರ್ತನೆಯಾಗಿತ್ತು. ಪಾಕಿಸ್ತಾನದ ‘ಆಧಾರರಹಿತ ಆರೋಪಗಳನ್ನು’ ಓಂ ಬಿರ್ಲಾ ನೇತೃತ್ವದ ನಿಯೋಗವು ವಿರೋಧಿಸಿತ್ತು. ಹಾಗಾಗಿ, ಮಾಲೆ ಕರಾರಿನಲ್ಲಿ ಈ ವಿಚಾರ ಸೇರ್ಪಡೆ ಆಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.