ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ರಷ್ಯಾ ರಕ್ಷಣಾ ಸಚಿವ ಆಂಡ್ರೆ ಬೆಲೌಸೊವ್
ರಾಯಿಟರ್ಸ್ ಚಿತ್ರ
ಬೀಜಿಂಗ್/ಭಾರತ: S–400 ಟ್ರಯಂಪ್ ಕ್ಷಿಪಣಿ ವ್ಯವಸ್ಥೆಗಳ ಪೂರೈಕೆ, Su-30 MKI ಯುದ್ಧ ವಿಮಾನಗಳನ್ನು ಮೇಲ್ದರ್ಜೆಗೇರಿಸುವುದು ಹಾಗೂ ನಿರ್ಣಾಯಕ ಮಿಲಿಟರಿ ಯಂತ್ರಾಂಶಗಳ ಖರೀದಿಗೆ ಸಂಬಂಧಿಸಿದಂತೆ ಭಾರತ ಮತ್ತು ರಷ್ಯಾ ಶುಕ್ರವಾರ ಮಾತುಕತೆ ನಡೆಸಿವೆ.
ಚೀನಾದ ಚಿಂಗ್‌ಡಾವ್‌ನಲ್ಲಿ ನಡೆದ ಶಾಂಘೈ ಸಹಕಾರ ಒಕ್ಕೂಟದ (ಎಸ್‌ಸಿಒ) ಶೃಂಗಸಭೆಯ ಸಂದರ್ಭದಲ್ಲಿ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ರಷ್ಯಾ ರಕ್ಷಣಾ ಸಚಿವ ಆಂಡ್ರೆ ಬೆಲೌಸೊವ್ ಗುರುವಾರ ಮಾತುಕತೆ ನಡೆಸಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಎಸ್‌ಸಿಒ ಶೃಂಗಸಭೆಯು ಬುಧವಾರ ಮತ್ತು ಗುರುವಾರ ನಡೆಯಿತು. ಒಕ್ಕೂಟದ ಸದಸ್ಯ ರಾಷ್ಟ್ರಗಳ ರಕ್ಷಣಾ ಸಚಿವರು ಭಾಗವಹಿಸಿದ್ದರು.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಮೇಲೆ ಪಾಕಿಸ್ತಾನ ಬೆಂಬಲಿತ ಉಗ್ರರು ನಡೆಸಿದ್ದ ದಾಳಿಯ ಬಗ್ಗೆ ಶೃಂಗಸಭೆಯ ಜಂಟಿ ಹೇಳಿಕೆಯಲ್ಲಿ ಉಲ್ಲೇಖಿಸಬೇಕು ಎಂದು ಭಾರತ ಒತ್ತಾಯಿಸಿತ್ತು. ಆದಾಗ್ಯೂ, ಪಾಕ್‌ನ ಬಲೂಚಿಸ್ತಾನದಲ್ಲಿ ಪ್ರತ್ಯೇಕತಾವಾದಿಗಳು ನಡೆಸಿದ್ದ ದಾಳಿಯನ್ನಷ್ಟೇ ಉಲ್ಲೇಖಿಸಲಾಗಿತ್ತು. ಆ ಕಾರಣಕ್ಕೆ, ರಾಜನಾಥ ಸಿಂಗ್ ಅವರು ಜಂಟಿ ಹೇಳಿಕೆಗೆ ಸಹಿ ಮಾಡಿರಲಿಲ್ಲ.
ಹೀಗಾಗಿ, ಜಂಟಿ ಹೇಳಿಕೆ ಬಿಡುಗಡೆ ಆಗದೆಯೇ ಶೃಂಗಸಭೆ ಅಂತ್ಯಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.