ಪರಿಹಾರ ಸಾಮಗ್ರಿಗಳ ರವಾನೆ
–ಎಕ್ಸ್ ಚಿತ್ರ
ನವದೆಹಲಿ: ಭೂಕಂಪ ಪೀಡಿತ ಮ್ಯಾನ್ಮಾರ್‌ಗೆ ಭಾರತ ಸುಮಾರು 15 ಟನ್ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದೆ ಎಂದು ಮೂಲಗಳು ತಿಳಿಸಿವೆ.
ಹಿಂಡನ್ ವಾಯುನೆಲೆಯಿಂದ ಭಾರತೀಯ ವಾಯುಪಡೆಯ ‘ಸಿ–130ಜೆ’ ಸರಕು ಸಾರಿಗೆ ವಿಮಾನದಲ್ಲಿ ಮ್ಯಾನ್ಮಾರ್‌ಗೆ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಡೇರೆಗಳು, ಹಾಸಿಗೆ, ಹೊದಿಕೆ, ಆಹಾರ ಪದಾರ್ಥಗಳು, ನೀರು ಶುದ್ಧೀಕರಣ ಯಂತ್ರಗಳು, ನೈರ್ಮಲ್ಯ ಕಿಟ್‌ಗಳು, ಸೌರ ದೀಪಗಳು, ಜನರೇಟರ್ ಸೆಟ್‌ಗಳು, ಅಗತ್ಯ ಔಷಧಗಳು (ಪ್ಯಾರಸಿಟಮಾಲ್, ಕ್ಯಾನುಲಾ, ಸಿರಿಂಜ್‌ಗಳು, ಕೈಗವಸುಗಳು, ಹತ್ತಿ ಬ್ಯಾಂಡೇಜ್‌ಗಳು) ಸೇರಿದಂತೆ ಇತರೆ ಅಗತ್ಯ ವಸ್ತುಗಳನ್ನು ಮ್ಯಾನ್ಮಾರ್‌ಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ‘ಎಕ್ಸ್’ನಲ್ಲಿ ಮಾಹಿತಿ ನೀಡಿದ್ದಾರೆ.
ಥಾಯ್ಲೆಂಡ್ ಮತ್ತು ಮ್ಯಾನ್ಮಾರ್ ದೇಶಗಳಲ್ಲಿ ಶುಕ್ರವಾರ 7.7ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿದ್ದು, ಜನರನ್ನು ಬೆಚ್ಚಿಬೀಳಿಸಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಮ್ಯಾನ್ಮಾರ್‌ನಲ್ಲಿ ನೂರಾರು ಮಂದಿ ಮೃತಪಟ್ಟಿದ್ದಾರೆ. ಹಲವರು ನಾಪತ್ತೆಯಾಗಿದ್ದಾರೆ.
ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ನಿರ್ಮಾಣ ಹಂತದ 30 ಮಹಡಿಯ ಸರ್ಕಾರಿ ಕಟ್ಟಡ ನೆಲಕ್ಕುರುಳಿದೆ. ಮ್ಯಾನ್ಮಾರ್ ಸರ್ಕಾರವು 6 ವಲಯಗಳಲ್ಲಿ ತುರ್ತುಸ್ಥಿತಿ ಘೋಷಿಸಿದೆ. ಮ್ಯಾನ್ಮಾರ್‌ನ 2ನೇ ಅತಿದೊಡ್ಡ ನಗರವಾಗಿರುವ ಮ್ಯಾಂಡಲೆ ಭೂಕಂಪದ ಕೇಂದ್ರಬಿಂದುವಾಗಿದೆ.
ಅಮೆರಿಕದ ಭೂವಿಜ್ಞಾನ ಕೇಂದ್ರದ ಪ್ರಕಾರ, ಕೇಂದ್ರ ಬಿಂದುವಿನಲ್ಲಿ ಸುಮಾರು 10 ಕಿ.ಮೀ ಆಳದಲ್ಲಿ ಭೂಕಂಪನವಾಗಿದೆ. ಅದರ ತೀವ್ರತೆಯು ಕೇಂದ್ರಬಿಂದುವಿನಿಂದ 10 ಕಿ.ಮೀ ಪರಿಧಿಯಲ್ಲಿ ವ್ಯಕ್ತವಾಗಿದೆ ಎಂದು ಅಂದಾಜು ಮಾಡಿದೆ.
ಮೊದಲಿಗೆ 7.7 ತೀವ್ರತೆಯ ಭೂಕಂಪನವಾಗಿದ್ದು, 11 ನಿಮಿಷದ ತರುವಾಯ ಮತ್ತೆ 6.4 ತೀವ್ರತೆಯ ಭೂಕಂಪ ಸಂಭವಿಸಿರುವುದು ದಾಖಲಾಗಿದೆ. 7.7 ತೀವ್ರತೆಯು ಹೆಚ್ಚು ಪ್ರಬಲವಾದುದು ಎಂದು ಕೇಂದ್ರವು ವಿಶ್ಲೇಷಿಸಿದೆ.
ಭೂಕಂಪದ ಅನುಭವವಾದಂತೆ ಬ್ಯಾಂಕಾಕ್ ನಗರದಲ್ಲಿ ಎಚ್ಚರಿಕೆ ಗಂಟೆಯನ್ನು ಮೊಳಗಿಸಲಾಯಿತು. ಬ್ಯಾಂಕಾಕ್‌ನ ಒಟ್ಟು ಜನಸಂಖ್ಯೆ 1.7 ಕೋಟಿಗೂ ಹೆಚ್ಚಿದ್ದು, ಹೆಚ್ಚಿನವರು ಬಹುಮಹಡಿ ವಸತಿ ಸಂಕೀರ್ಣಗಳಲ್ಲಿಯೇ ವಾಸವಿದ್ದಾರೆ.
ಇತ್ತ, ಮ್ಯಾನ್ಮಾರ್‌ನಲ್ಲಿ ಸೇನಾ ಸರ್ಕಾರವು ರಾಜಧಾನಿ ನೈಪಿತಾವ್, ಮ್ಯಾಂಡಲೆ ಸೇರಿ ಆರು ವಲಯಗಳಲ್ಲಿ ತುರ್ತು ಸ್ಥಿತಿಯನ್ನು ಘೋಷಿಸಿದೆ. ನಾಗರಿಕ ಯುದ್ಧ ನಡೆದಿರುವ ದೇಶದಲ್ಲಿ ಹೇಗೆ ಬಾಧಿತ ಪ್ರದೇಶಗಳಿಗೆ ನೆರವಾಗಲಿದೆ ಎಂಬುದು ಸದ್ಯ ಸ್ಪಷ್ಟವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.