ADVERTISEMENT

ಸೈಬರ್, ಹವಾಮಾನ ಬದಲಾವಣೆಯಂತಹ ಸವಾಲು ಎದುರಿಸಲು ಸಿದ್ಧವಾಗಿರಬೇಕು: ರಾಷ್ಟ್ರಪತಿ

ಪಿಟಿಐ
Published 28 ನವೆಂಬರ್ 2024, 10:57 IST
Last Updated 28 ನವೆಂಬರ್ 2024, 10:57 IST
ದ್ರೌಪದಿ ಮುರ್ಮು
ದ್ರೌಪದಿ ಮುರ್ಮು   

ಉದಕಮಂಡಲ (ತಮಿಳುನಾಡು): ಕ್ಷಿಪ್ರ ಗತಿಯಲ್ಲಿ ಬದಲಾಗುತ್ತಿರುವ ಭೌಗೋಳಿಕ-ರಾಜಕೀಯ ಸನ್ನಿವೇಶದಲ್ಲಿ ಸೈಬರ್‌ ವಂಚನೆ, ಭಯೋತ್ಪಾದನೆಯಂತಹ ಹೊಸ ರಾಷ್ಟ್ರೀಯ ಭದ್ರತಾ ಸವಾಲುಗಳು ಸೇರಿದಂತೆ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ದೇಶ ಸಿದ್ಧವಾಗಿರಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.

ತಮಿಳುನಾಡಿನ ನೀಲಗಿರಿ ಜಿಲ್ಲೆಯ ವೆಲ್ಲಿಂಗ್‌ಟನ್‌ನಲ್ಲಿರುವ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಹವಾಮಾನ ಬದಲಾವಣೆ ಸಮಸ್ಯೆಯು ಹೊಸ ಆಯಾಮ ಪಡೆದುಕೊಳ್ಳುತ್ತಿದೆ. ಅದನ್ನು ಅರ್ಥಮಾಡಿಕೊಂಡು ನಿರ್ವಹಿಸಬೇಕು. ಇದಕ್ಕಾಗಿ ಇತ್ತೀಚಿನ ಅತ್ಯಾಧುನಿಕ ತಂತ್ರಜ್ಞಾನವನ್ನು ಅನ್ವಯಿಸುವ ಅಗತ್ಯವಿದೆ. ನಮ್ಮ ಸೇನೆಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಭವಿಷ್ಯದ ಸವಾಲುಗಳನ್ನು ಎದುರಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದು ತಿಳಿಸಿದ್ದಾರೆ.

‘ವೇಗವಾಗಿ ಬದಲಾಗುತ್ತಿರುವ ಭೌಗೋಳಿಕ–ರಾಜಕೀಯ ವಾತಾವರಣದಲ್ಲಿ, ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ನಾವು ಸಿದ್ಧರಾಗಿರಬೇಕು. ನಾವು ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು ಭದ್ರಪಡಿಸುವುದು ಮಾತ್ರವಲ್ಲದೆ, ಸೈಬರ್ ವಂಚನೆ ಮತ್ತು ಭಯೋತ್ಪಾದನೆಯಂತಹ ಹೊಸ ರಾಷ್ಟ್ರೀಯ ಭದ್ರತಾ ಸವಾಲುಗಳಿಗೆ ಸಿದ್ಧರಾಗಬೇಕು’ ಎಂದು ಮುರ್ಮು ಹೇಳಿದ್ದಾರೆ.

ADVERTISEMENT

‘ದೇಶವು ಪ್ರಮುಖ ರಕ್ಷಣಾ ಶಸ್ತ್ರಾಸ್ತ್ರಗಳ ಉತ್ಪಾದನಾ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿದೆ. ಜತೆಗೆ ದೇಶದ ರಕ್ಷಣಾ ಉದ್ಯಮವು ಅತ್ಯಾಧುನಿಕ ತಂತ್ರಜ್ಞಾನವನ್ನು ವೇಗವಾಗಿ ಅಳವಡಿಸಿಕೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ‘ಆತ್ಮ ನಿರ್ಭರ್‌ ಭಾರತ’ ದೃಷ್ಟಿಕೋನಕ್ಕೆ ಅನುಗುಣವಾಗಿ ಮುನ್ನಡೆಯುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.