ನವದೆಹಲಿ: ‘ಭಾರತ ಹಾಗೂ ಸಿಂಗಪುರ ನಡುವಿನ ಸಂಬಂಧ ರಾಜತಾಂತ್ರಿಕತೆ ಮೀರಿದ್ದಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ದ್ವಿಪಕ್ಷೀಯ ಸಂಬಂಧ ವಿಸ್ತರಣೆ ಸಂಬಂಧ ನವದೆಹಲಿಗೆ ಬಂದಿಳಿದ ಸಿಂಗಪುರ ಪ್ರಧಾನಿ ಲಾರೆನ್ಸ್ ವಾಂಗ್ ಮುಂದೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಕಂಪ್ಯೂಟಿಂಗ್ ಹಾಗೂ ಇತರೆ ಡಿಜಿಟಲ್ ತಂತ್ರಜ್ಞಾನ ಕ್ಷೇತ್ರದಲ್ಲಿ ಸಹಕಾರ ವೃದ್ಧಿಸಲು ಉಭಯ ರಾಷ್ಟ್ರಗಳು ನಿರ್ಧರಿಸಿವೆ. ಭಯೋತ್ಪಾದನೆ ವಿಚಾರದಲ್ಲಿ ಎರಟೂ ರಾಷ್ಟ್ರಗಳು ಸಮಾನ ಅಭಿಪ್ರಾಯ ಹೊಂದಿವೆ. ಮಾನವೀಯತೆ ಮೇಲೆ ನಂಬಿಕೆಯಿಟ್ಟಿರುವ ಪ್ರತಿ ರಾಷ್ಟ್ರವೂ ಭಯೋತ್ಪಾದನೆ ವಿರುದ್ಧ ಒಗ್ಗಟ್ಟು ಪ್ರದರ್ಶನ ಹಾಗೂ ಹೋರಾಡುವುದು ಕರ್ತವ್ಯವಾಗಿದೆ’ ಎಂದು ಮೋದಿ ಪ್ರತಿಪಾದಿಸಿದರು.
‘ಇಡೀ ಜಗತ್ತು ಅನಿಶ್ಚಿತತೆ ಹಾಗೂ ಪ್ರಕ್ಷುಬ್ಧತೆಯಿಂದ ಕೂಡಿದ್ದು, ಭಾರತ, ಸಿಂಗಪುರ ನಡುವಿನ ಸಹಭಾಗಿತ್ವವು ಈ ಹಿಂದೆಂದಿಗಿಂತಲೂ ಹೆಚ್ಚು ಮುಖ್ಯವಾಗಿದೆ’ ಎಂದು ವಾಂಗ್ ಅವರು ತಿಳಿಸಿದರು.
ಉಭಯ ರಾಷ್ಟ್ರಗಳ ನಡುವಿನ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ವಿಸ್ತರಿಸುವ ಮಾರ್ಗಸೂಚಿಯನ್ನು ಈ ವೇಳೆ ಉಭಯ ನಾಯಕರು ಅನಾವರಣಗೊಳಿಸಿದರು. ಮಾತುಕತೆ ವೇಳೆ ಹಲವು ಒಪ್ಪಂದಗಳಿಗೂ ಸಹಿ ಹಾಕಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.