ADVERTISEMENT

ಭಾರತದಿಂದ ಹೈಪರ್‌ಸಾನಿಕ್ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ಪಿಟಿಐ
Published 17 ನವೆಂಬರ್ 2024, 4:07 IST
Last Updated 17 ನವೆಂಬರ್ 2024, 4:07 IST
<div class="paragraphs"><p>ಹೈಪರ್‌ಸಾನಿಕ್ ಕ್ಷಿಪಣಿ</p></div>

ಹೈಪರ್‌ಸಾನಿಕ್ ಕ್ಷಿಪಣಿ

   

(ಪಿಟಿಐ ಚಿತ್ರ)

ನವದೆಹಲಿ : ಒಡಿಶಾದ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಿಂದ ದೂರಗಾಮಿ ಹೈಪರ್‌ಸಾನಿಕ್ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಭಾರತ ಯಶಸ್ವಿಯಾಗಿ ಶನಿವಾರ ನಡೆಸಿದೆ. ಇದರಿಂದ ದೇಶದ ರಕ್ಷಣಾ ಸಾಮರ್ಥ್ಯ ಮತ್ತಷ್ಟು ಬಲಗೊಂಡಿದೆ ಮತ್ತು ಇಂಥ ಕ್ಷಿಪಣಿ ವ್ಯವಸ್ಥೆ ಇರುವ ಕೆಲವೇ ದೇಶಗಳ ಪಟ್ಟಿಗೆ ಭಾರತವೂ ಸೇರ್ಪಡೆಯಾಗಿದೆ.

ADVERTISEMENT

ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ಕ್ಷಿಪಣಿಯ ಪರೀಕ್ಷೆಯನ್ನು, ‘ಅದ್ಭುತ ಸಾಧನೆ’ ಮತ್ತು ‘ಐತಿಹಾಸಿಕ ಗಳಿಗೆ’ ಎಂದು ಬಣ್ಣಿಸಿದ್ದಾರೆ.

‘ಹೈಪರ್‌ಸಾನಿಕ್‌ ಕ್ಷಿ‍‍ಪಣಿಯ ಪರೀಕ್ಷಾರ್ಥ ಪ್ರಯೋಗದ ಯಶಸ್ಸಿನೊಂದಿಗೆ ಭಾರತವು ಮಹತ್ವದ ಮೈಲುಗಲ್ಲು ತಲುಪಿದೆ. ಗಮನಾರ್ಹ ಮತ್ತು ಸುಧಾರಿತ ಮಿಲಿಟರಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯವನ್ನು ಹೊಂದಿರುವ ಕೆಲವೇ ಕೆಲವು ರಾಷ್ಟ್ರಗಳ ಗುಂಪಿನಲ್ಲಿ ಭಾರತವೂ ಗುರುತಿಸಿಕೊಂಡಿದೆ’ ಎಂದು ‘ಎಕ್ಸ್’ನಲ್ಲಿ ಹೇಳಿದ್ದಾರೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದೆ. ಇದು 1,500 ಕಿ.ಮೀ.ಗೂ ಹೆಚ್ಚು ದೂರ ವಿವಿಧ ರೀತಿಯ ಹಲವು ಶಸ್ತ್ರಾಸ್ತ್ರ  ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದರು.

ಹೈಪರ್‌ಸಾನಿಕ್‌ ಕ್ಷಿಪಣಿಗಳು ಸಾಂಪ್ರದಾಯಿಕ ಶಸ್ತ್ರಾಸ್ತ್ರ ಮತ್ತು ಅಣ್ವಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿವೆ. ಶಬ್ದದ  ವೇಗದ ಐದು ಪಟ್ಟು ವೇಗದಲ್ಲಿ ಈ ಕ್ಷಿಪಣಿ ಸಾಗುತ್ತದೆ (ತಾಸಿಗೆ 1,220 ಕಿ.ಮೀ). ಇದರ ಮೂರು ಪಟ್ಟು ವೇಗದಲ್ಲಿ ಸಾಗುವ ಕ್ಷಿಪಣಿಗಳನ್ನು ಚೀನಾ ಮತ್ತು ರಷ್ಯಾ ಅಭಿವೃದ್ಧಿಪಡಿಸಿವೆ. ಅಮೆರಿಕ ಇಂತಹ ಕ್ಷಿಪಣಿ ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದೆ. 

ಹೈದರಾಬಾದ್‌ನ ಡಾ.ಎಪಿಜೆ ಅಬ್ದುಲ್‌ ಕಲಾಂ ಕ್ಷಿಪಣಿ ಸಂಕೀರ್ಣದಲ್ಲಿರುವ ಪ್ರಯೋಗಾಲಯ ಮತ್ತು ಡಿಆರ್‌ಡಿಒದ ಇತರ ಹಲವು ಪ್ರಯೋಗಾಲಯಗಳು ಹಾಗೂ ಕೆಲವು ಕೈಗಾರಿಕಾ ಪಾಲುದಾರರ ಜೊತೆಗೂಡಿ ದೇಶೀಯವಾಗಿ ಈ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲಾಗಿದೆ.

ಉಡ್ಡಯನದ ವೇಳೆ ಡಿಆರ್‌ಡಿಒದ ಹಿರಿಯ ವಿಜ್ಞಾನಿಗಳು ಮತ್ತು ಸೇನಾಪಡೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಸಚಿವರ ಶ್ಲಾಘನೆ

ಈ ಅದ್ಭುತ ಸಾಧನೆಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಸಶಸ್ತ್ರ ಪಡೆಗಳು ಮತ್ತು ಎಲ್ಲರನ್ನೂ ರಾಜನಾಥ್‌ ಸಿಂಗ್ ಶ್ಲಾಘಿಸಿದ್ದಾರೆ. ಕ್ಷಿಪಣಿ ಉಡಾಯಿಸಿದ ಬಳಿಕ ವಿವಿಧೆಡೆ ನಿಯೋಜಿಸಲಾದ ರೇಂಜ್‌ ಸಿಸ್ಟಂಗಳ ಮೂಲಕ ಅದನ್ನು ಸೂಕ್ಷ್ಮವಾಗಿ ಗಮನಿಸಲಾಗಿದೆ. ಹಾರಾಟದ ದತ್ತಾಂಶಗಳನ್ನು ಡೌನ್‌ರೇಂಜ್‌ ಶಿಪ್ ಸ್ಟೇಷನ್‌ಗಳ ಮೂಲಕ ಸಂಗ್ರಹಿಸಲಾಗಿದ್ದು ನಿಖರತೆ ಮತ್ತು ಪೂರ್ವಯೋಜನೆಯಂತೆಯೇ ವಿವಿಧ ಚಲನೆಗಳು ಯಶಸ್ವಿಯಾಗಿ ನಡೆದಿವೆ ಎಂದು ದೃಢಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.