ಆಂಧ್ರ ಪ್ರದೇಶದ ಕರ್ನೂಲ್‌ನಲ್ಲಿ ರಕ್ಷಣಾ ಹಾಗೂ ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ಅಭಿವೃದ್ಧಿಪಡಿಸಿದ ಲೇಸರ್ ಆಧಾರಿತ ಶಸ್ತ್ರಾಸ್ತ್ರ ವ್ಯವಸ್ಥೆ ಪರೀಕ್ಷೆ ನಡೆಸಿತು
ಪಿಟಿಐ ಚಿತ್ರ
ನವದೆಹಲಿ: ರಕ್ಷಣಾ ಹಾಗೂ ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ಅಭಿವೃದ್ಧಿಪಡಿಸಿದ ಲೇಸರ್ ಆಧಾರಿತ ಶಸ್ತ್ರಾಸ್ತ್ರ ವ್ಯವಸ್ಥೆ ಪರೀಕ್ಷೆ ಯಶಸ್ವಿಯಾಗಿದೆ.
ಭಾನುವಾರ ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಭಾನುವಾರ ಈ ಪರೀಕ್ಷೆ ನಡೆಯಿತು. ಆ ಮೂಲಕ ಮಾನವರಹಿತ ಡ್ರೋನ್ (ಯುಎವಿ), ವಿಮಾನಗಳನ್ನು ಹೊಡೆದುರುಳಿಸುವ ಅತ್ಯಾಧುನಿಕ ಶಸ್ತ್ರಾಸ್ತ್ರ ಹೊಂದಿದ ಗೌರವಕ್ಕೆ ಭಾರತ ಪಾತ್ರವಾಗಿದೆ.
ಭವಿಷ್ಯದಲ್ಲಿ ಎದುರಾಗುವ ಭದ್ರತಾ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಲೇಸರ್ ಆಧಾರಿತ ಶಸ್ತ್ರಾಸ್ತ್ರವನ್ನು ಅಭಿವೃದ್ಧಿಪಡಿಸಿದೆ. ಅಮೆರಿಕ, ಚೀನಾ ಹಾಗೂ ರಷ್ಯಾ ಮಾತ್ರ ಇಂತಹ ವ್ಯವಸ್ಥೆ ಹೊಂದಿದೆ.
‘ಕರ್ನೂಲ್‌ನಲ್ಲಿರುವ ಹೈ ಎನರ್ಜಿ ಸಿಸ್ಟಂ ಆ್ಯಂಡ್ ಸೈನ್ಸಸ್ ಸೆಂಟರ್ (ಚೆಸ್–ಡಿಆರ್‌ಡಿಒ) ವಾಹನಕ್ಕೆ ಅಳವಡಿಸಿದ ಲೇಸರ್ ಆಧಾರಿತ ಎಂಕೆ–2ಎ ಶಸ್ತ್ರಾಸ್ತ್ರವನ್ನು ಯಶಸ್ವಿಯಾಗಿ ಪರೀಕ್ಷಿಸಿತು’ ಎಂದು ಡಿಆರ್‌ಡಿಒ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.
‘ಕಣ್ಗಾವಲು ಸೆನ್ಸರ್‌ನ ಮೂಲಕ ಮಾನವರಹಿತ ವಿಮಾನ, ಡ್ರೋನ್‌ಗಳನ್ನು ಗುರುತಿಸಿ ಯಶಸ್ವಿಯಾಗಿ ಹೊಡೆದುರುಳಿಸಿತು. ಆ ಮೂಲಕ ಹೆಚ್ಚಿನ ಸಾಮರ್ಥ್ಯ ಹೊಂದಿದ ಲೇಸರ್ ಶಸ್ತ್ರಾಸ್ತ್ರಗಳ ವ್ಯವಸ್ಥೆ ಹೊಂದಿದ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಯಾಯಿತು‘ ಎಂದು ತಿಳಿಸಿದೆ.
ವಿಶೇಷತೆ: 30 ಕಿಲೋ ವಾಟ್ ಲೇಸರ್ ಶಕ್ತಿ ಬಳಸಿಕೊಂಡು, ಈ ಆಯುಧ ಕೆಲಸ ಮಾಡುತ್ತದೆ. ಐದು ಕಿ.ಮೀ ವ್ಯಾಪ್ತಿ ಹೊಂದಿದ್ದು, ಇಷ್ಟು ದೂರದಲ್ಲಿ ಹಾರಾಟ ನಡೆಸುವ ಹೆಲಿಕಾಪ್ಟರ್, ಯುಎವಿ, ಡ್ರೋನ್‌ಗಳನ್ನು ನಿಖರವಾಗಿ ಗುರುತಿಸಿ ಹೊಡೆದುರುಳಿಸಲಿದೆ. ಇದನ್ನು ವಾಹನಗಳು ಮಾತ್ರವಲ್ಲದೇ, ಹಡಗುಗಳ ಮೇಲೂ ನಿಯೋಜಿಸಿ, ಶತ್ರುಗಳ ಯುಎವಿ ಮೇಲೂ ದಾಳಿ ನಡೆಸಬಹುದು. ಭಾರತೀಯ ವಾಯುಸೇನೆಯು ತಮ್ಮ ವಿಮಾನಗಳಲ್ಲಿ ಇಂತಹ ಸೌಲಭ್ಯಗಳನ್ನು ಅಳವಡಿಸಲು ಈಗಾಗಲೇ ಕಾರ್ಯೋನ್ಮುಖವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.