ADVERTISEMENT

ಜುಲೈ ಅಂತ್ಯದ ವೇಳೆಗೆ 51.6 ಕೋಟಿ ಜನರಿಗೆ ಲಸಿಕೆ: ಕೇಂದ್ರ ಆರೋಗ್ಯ ಸಚಿವ

ಏಜೆನ್ಸೀಸ್
Published 16 ಮೇ 2021, 5:06 IST
Last Updated 16 ಮೇ 2021, 5:06 IST
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್   

ನವದೆಹಲಿ: ಜುಲೈ ಅಂತ್ಯದ ವೇಳೆಗೆ ಭಾರತದಲ್ಲಿ 51.6 ಕೋಟಿ ಜನರಿಗೆ ಲಸಿಕೆ ತಲುಪಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಶನಿವಾರ ತಿಳಿಸಿದ್ದಾರೆ.

ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶದ ಆರೋಗ್ಯ ಸಚಿವರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿರುವ ಅವರು, 'ದೇಶದಲ್ಲಿ ಕೋವಿಡ್‌ ಲಸಿಕೆಯ ಬೇಡಿಕೆ ಹೆಚ್ಚುತ್ತಿದೆ. ಆ ಕಾರಣ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲಾಗುತ್ತಿದೆ.' ಎಂದು ಹೇಳಿದ್ದಾರೆ.

'ಈ ವರೆಗೆ 18 ಕೋಟಿ ಅರ್ಹ ಫಲಾನುಭವಿಗಳಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ. ಜುಲೈ ಅಂತ್ಯದ ವೇಳೆಗೆ 51.6 ಕೋಟಿ ಜನರಿಗೆ ಲಸಿಕೆ ತಲುಪಲಿದೆ. ಈಗಾಗಲೇ ಸ್ಪುಟ್ನಿಕ್ ಲಸಿಕೆಯನ್ನು ಅನುಮೋದಿಸಲಾಗಿದೆ. ಭಾರತದಲ್ಲೇ ತಯಾರಿಸಲಾಗಿರುವ ಕೋವ್ಯಾಕ್ಸಿನ್‌ ಮತ್ತು ಕೋವಿಶೀಲ್ಡ್‌ ಲಸಿಕೆಗಳ ಉತ್ಪಾದನೆಯನ್ನು ಹಂತಹಂತವಾಗಿ ಹೆಚ್ಚಿಸಲಾಗುತ್ತಿದೆ' ಎಂದು ಅವರು ತಿಳಿಸಿದ್ದಾರೆ.

ADVERTISEMENT

ಇದೇ ವೇಳೆ ನಾಲ್ಕು ರಾಜ್ಯಗಳು ಎದುರಿಸುತ್ತಿರುವ ಕೋವಿಡ್‌ ಸಂಬಂಧಿತ ಸವಾಲುಗಳ ಬಗ್ಗೆ ಹರ್ಷವರ್ಧನ್‌ ಅವರು ಮಾಹಿತಿ ಪಡೆದಿದ್ದಾರೆ. 'ಗುಜರಾತ್‌ನಲ್ಲಿ ಏಪ್ರಿಲ್‌ ತಿಂಗಳಿಂದ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚಿದೆ. ಅಲ್ಲಿ ಚೇತರಿಕೆ ಪ್ರಮಾಣವು ಶೇಕಡಾ 79 ರಷ್ಟಿದೆ. ಇದು ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಾಗಿದೆ' ಎಂದು ಕೇಂದ್ರ ಆರೋಗ್ಯ ಸಚಿವರು ತಿಳಿಸಿದ್ದಾರೆ.

'ಏಪ್ರಿಲ್ ಆರಂಭದಿಂದಲೂ ಆಂಧ್ರಪ್ರದೇಶದ ಸೋಂಕಿತರ ಪ್ರಮಾಣದಲ್ಲಿ ಏರಿಕೆ ಕಂಡುಬರುತ್ತಿದೆ. ಪ್ರತಿ ವಾರದ ಬೆಳವಣಿಗೆಯ ದರವು ಶೇಕಡಾ 30.3 ರಷ್ಟಿದೆ. ಚಿತ್ತೂರು, ಪೂರ್ವ ಗೋದಾವರಿ, ಗುಂಟೂರು, ಶ್ರೀಕಾಕುಳಂ, ವಿಶಾಖಪಟ್ಟಣ ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾವಹಿಸಲಾಗಿದೆ' ಎಂದು ಹರ್ಷವರ್ಧನ್‌ ಹೇಳಿದ್ದಾರೆ.

ಆರು ವಾರಗಳ ಅವಧಿಯಲ್ಲಿ ಉತ್ತರ ಪ್ರದೇಶದ ಸೋಂಕಿತರ ಸಂಖ್ಯೆಯಲ್ಲಿ (5,500 ರಿಂದ 31,000) ಗಣನೀಯ ಏರಿಕೆ ಕಂಡುಬಂದಿದೆ. ಲಕ್ನೋ ಮತ್ತು ಮೀರತ್ ನಗರಗಳು 14,000ಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿವೆ. ಅಲ್ಲಿಯೂ ಹೆಚ್ಚಿನ ನಿಗಾವಹಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.

ಮಧ್ಯಪ್ರದೇಶದ 10 ಜಿಲ್ಲೆಗಳು ಶೇಕಡಾ 20ಕ್ಕಿಂತ ಹೆಚ್ಚು ಪಾಸಿಟಿವಿಟಿ ದರವನ್ನು ಹೊಂದಿವೆ. ರಾಜ್ಯದಾದ್ಯಂತ ಒಂದು ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ. ಇಂದೋರ್, ಭೋಪಾಲ್, ಗ್ವಾಲಿಯರ್ ಮತ್ತು ಜಬಲ್ಪುರಗಳಲ್ಲಿ ಸೋಂಕಿತರ ಪ್ರಮಾಣ ತಗ್ಗಿಸಲು ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದು ಹರ್ಷವರ್ಧನ್‌ ತಿಳಿಸಿದ್ದಾರೆ.

ಉತ್ತರ ಪ್ರದೇಶ ಮತ್ತು ಗುಜರಾತ್‌ ರಾಜ್ಯಗಳಲ್ಲಿ 18ರಿಂದ 45 ವರ್ಷ ವಯಸ್ಸಿನವರು ಅಧಿಕವಾಗಿ ಮರಣ ಹೊಂದುತ್ತಿರುವುದರ ಬಗ್ಗೆ ಸಭೆಯಲ್ಲಿ ಎಚ್ಚರಿಕೆ ನೀಡಲಾಗಿದೆ.

ಐಸಿಯು ಮತ್ತು ಆಮ್ಲಜನಕ ಸೌಕರ್ಯ ಇರುವ ಹಾಸಿಗೆಗಳನ್ನು ಹೆಚ್ಚಿಸುವುದು, ಸಣ್ಣ ನಗರಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು, ಔಷಧಿ ಸಂಗ್ರಹ ಮತ್ತು ಲಭ್ಯತೆಯ ಬಗ್ಗೆ ಇದೇ ವೇಳೆ ಚರ್ಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.