ADVERTISEMENT

100 ಕೋಟಿ ಡೋಸ್‌ ಲಸಿಕೆ: ಒಂದು ವಾರದಲ್ಲಿ ಗುರಿ ಸಾಧನೆ- ಮನ್‌ಸುಖ್‌ ಮಾಂಡವೀಯ

ಪಿಟಿಐ
Published 16 ಅಕ್ಟೋಬರ್ 2021, 13:34 IST
Last Updated 16 ಅಕ್ಟೋಬರ್ 2021, 13:34 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ‘ಕೋವಿಡ್‌ ವಿರುದ್ಧದ ಲಸಿಕೆ 100 ಕೋಟಿ ಡೋಸ್ ಅನ್ನು ನೀಡಿದ ಗುರಿಯನ್ನು ಭಾರತ ಒಂದು ವಾರದಲ್ಲಿ ಮುಟ್ಟಲಿದೆ’ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಶನಿವಾರ ಹೇಳಿದರು.

ಲಸಿಕೆಯ ಬಗೆಗೆ ಇರುವ ತಪ್ಪುಗ್ರಹಿಕೆ ಮತ್ತು ಲಸಿಕೆ ಪಡೆಯುವುದರ ಬಗೆಗಿನ ಹಿಂಜರಿಕೆಯನ್ನು ನಿವಾರಿಸಲು ಗಾಯಕ ಕೈಲಾಶ್‌ ಖೇರ್ ರಚಿಸಿ, ಹಾಡಿರುವ ಗೀತೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಅಂಕಿ ಅಂಶಗಳ ಪ್ರಕಾರ, ದೇಶದಾದ್ಯಂತ ಶನಿವಾರ ಸಂಜೆಯವರೆಗೂ 97.23 ಕೋಟಿ ಲಸಿಕೆಯನ್ನು ನೀಡಲಾಗಿದೆ ಎಂದು ಸಚಿವರು ಕಾರ್ಯಕ್ರಮದಲ್ಲಿ ಹೇಳಿದರು.

ADVERTISEMENT

‘ಒಟ್ಟಾರೆ ಜನಸಂಖ್ಯೆಯ ಶೇ 70ರಷ್ಟು ಮಂದಿಗೆ ಕನಿಷ್ಠ ಒಂದು ಡೋಸ್, ಶೇ 30ರಷ್ಟು ಜನಸಂಖ್ಯೆಗೆ ಎರಡೂ ಡೋಸ್‌ ನೀಡಲಾಗಿದೆ. ಸೆಪ್ಟೆಂಬರ್‌ 17ರಂದು ಒಂದೇ ದಿನ 2.5 ಕೋಟಿ ಡೋಸ್ ನೀಡಿರುವ ದಾಖಲೆ ಆಗಿದೆ. ಮುಂದಿನ ವಾರ ನಾವು 100 ಕೋಟಿ ಡೋಸ್ ನೀಡಿದ ದಾಖಲೆ ಮುಟ್ಟಲಿದ್ದೇವೆ’ ಎಂದು ವಿವರಿಸಿದರು.

ಎಲ್ಲರ ಶ್ರಮದ ಪರಿಣಾಮ ಇದು ಸಾಧ್ಯವಾಗಿದೆ. ದೇಶದಲ್ಲಿ ಕೋವಿಡ್‌ ಸೋಂಕು ಪ್ರಕರಣಗಳು ಇಳಿಮುಖವಾಗುತ್ತಿವೆ. ಹೊಸದಾಗಿ 15,981 ಪ್ರಕರಣ ಪತ್ತೆಯಾಗಿದೆ. ಇದು, ಮೇ 9ರಂದು ಗರಿಷ್ಠ ಪ್ರಕರಣ ದಾಖಲಾಗಿದ್ದುದರ ಶೇ 4ರಷ್ಟಾಗಿದೆ ಎಂದು ಅವರು ತಿಳಿಸಿದರು.

ಲಸಿಕೆ ಕುರಿತು ಹಾಡು ರಚಿಸಿ, ಹಾಡಿರುವ ಖೇರ್‌ ಅವರು, ಲಸಿಕೆ ಕುರಿತಂತೆ ಜನರಲ್ಲಿ ಇರುವ ತಪ್ಪು ಗ್ರಹಿಕೆಗಳನ್ನು ನಿವಾರಿಸುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.