
ಗುಜರಾತ್‌ನಲ್ಲಿ ತಯಾರಿಸಿದ ಸೂಕ್ಷ್ಮ ಕೆತ್ತನೆಗಳಿರುವ ಮರದ ಜೋಕಾಲಿಯನ್ನು ಪ್ರಧಾನಿ ಮೋದಿ ಅವರು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರಿಗೆ ಉಡುಗೊರೆಯಾಗಿ ನೀಡಿದರು
–ಪಿಟಿಐ ಚಿತ್ರ
ನವದೆಹಲಿ: ಭಾರತ ಮತ್ತು ಯುಎಇ 2032ರವರೆಗೆ ಪ್ರತಿ ವರ್ಷವೂ ಸುಮಾರು ₹18.17 ಲಕ್ಷ ಕೋಟಿ (200 ಬಿಲಿಯನ್ ಡಾಲರ್) ವ್ಯಾಪಾರ ನಡೆಸುವ ಗುರಿ ನಿಗದಿಪಡಿಸಿವೆ.
ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಮೂರೂವರೆ ಗಂಟೆಗಳಿಗಾಗಿ ಭಾರತಕ್ಕೆ ಸೋಮವಾರ ಭೇಟಿ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಯುಎಇ ಅಧ್ಯಕ್ಷರನ್ನು ವಿಮಾನ ನಿಲ್ದಾಣದಲ್ಲಿಯೇ ಬರ ಮಾಡಿಕೊಂಡು, ತಬ್ಬಿಕೊಂಡರು.
ಇವರೊಂದಿಗೆ ಅಧ್ಯಕ್ಷರ ತಾಯಿ ಶೇಖ್ ಫಾತಿಮಾ ಬಿಂತ್ ಮುಬಾರಕ್ ಅಲ್ ಕೆತ್ಬಿ ಅವರೂ ಆಗಮಿಸಿದ್ದರು. ಇಬ್ಬರನ್ನೂ ಪ್ರಧಾನಿ ನಮ್ಮ ನಿವಾಸಕ್ಕೆ ಕರೆದೊಯ್ದು ಸತ್ಕರಿಸಿದರು. ಇಬ್ಬರಿಗೂ ಉಡುಗೊರೆಗಳನ್ನೂ ನೀಡಿದರು. ತಾಯಿ ಫಾತಿಮಾ ಅವರಿಗೆ ಕಾಶ್ಮೀರದ ಪಶ್ಮೀನಾ ಶಾಲನ್ನು ಮತ್ತು ಕಾಶ್ಮೀರ ಕಣಿವೆಯಲ್ಲಿ ಬೆಳೆದ ಕೇಸರಿಯನ್ನು ತೆಲಂಗಾಣದಲ್ಲಿ ತಯಾರಿಸಿದ ಬೆಳ್ಳಿ ಬಾಕ್ಸ್‌ಗಳಲ್ಲಿ ಇರಿಸಿ ಪ್ರಧಾನಿ ಮೋದಿ ಉಡುಗೊರೆ ನೀಡಿದರು.
ಪ್ರಧಾನಿ ನಿವಾಸದಲ್ಲಿಯೇ ಇಬ್ಬರು ನಾಯಕರು ಹಲವು ವಿಚಾರಗಳ ಕುರಿತು ಮಾತುಕತೆ ನಡೆಸಿದರು.
ಇಂಧನ, ಬಾಹ್ಯಾಕಾಶ ಮತ್ತು ನಾಗರಿಕ ಪರಮಾಣು ವಲಯದಲ್ಲಿ ಪರಸ್ಪರ ಸಹಕಾರ ನೀಡುವ ಬಗ್ಗೆ ಚರ್ಚಿಸಲಾಯಿತು. ಈ ಬಗ್ಗೆ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ತ್ರಿ ಮಾಹಿತಿ ನೀಡಿದರು. ಪ್ರತಿ ವರ್ಷವೂ 5 ಲಕ್ಷ ಟನ್‌ನಷ್ಟು ದ್ರವೀಕೃತ ನೈಸರ್ಗಿಕ ಅನಿಲವನ್ನು (ಎಲ್‌ಎನ್‌ಜಿ) ಭಾರತಕ್ಕೆ ಪೂರೈಕೆ ಮಾಡುವ ದೀರ್ಘಾವಧಿ ಒಪ್ಪಂದ ಮಾಡಿಕೊಳ್ಳಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.