ADVERTISEMENT

ರಷ್ಯಾ ಆಕ್ರಮಣಕ್ಕೆ ಭಿನ್ನ ನಿಲುವಿನ ಮಧ್ಯೆಯೂ ಬ್ರಿಟನ್ ಭಾರತ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2022, 19:04 IST
Last Updated 22 ಏಪ್ರಿಲ್ 2022, 19:04 IST
ನವದೆಹಲಿಯಲ್ಲಿ ಬೋರಿಸ್ ಜಾನ್ಸನ್ ಮತ್ತು ನರೇಂದ್ರ ಮೋದಿ ಅವರು ಪರಸ್ಪರ ಹಸ್ತಲಾಘವ ಮಾಡಿದರು –ಪಿಟಿಐ ಚಿತ್ರ
ನವದೆಹಲಿಯಲ್ಲಿ ಬೋರಿಸ್ ಜಾನ್ಸನ್ ಮತ್ತು ನರೇಂದ್ರ ಮೋದಿ ಅವರು ಪರಸ್ಪರ ಹಸ್ತಲಾಘವ ಮಾಡಿದರು –ಪಿಟಿಐ ಚಿತ್ರ   

ನವದೆಹಲಿ: ಭಾರತ ಮತ್ತು ಬ್ರಿಟನ್ ಮಧ್ಯೆ ನೂತನ ಮತ್ತು ವಿಸ್ತೃತ ರಕ್ಷಣಾ ಸಹಕಾರ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಒಪ್ಪಿಗೆ ಸೂಚಿಸಿದ್ದಾರೆ. ಉಕ್ರೇನ್‌ನಲ್ಲಿ ರಷ್ಯಾ ಅತಿಕ್ರಮಣದ ವಿಚಾರದಲ್ಲಿ ಭಾರತದ ನಿಲುವಿಗೆ ಸಂಬಂಧಿಸಿದಂತೆ ಬ್ರಿಟನ್‌ ಭಿನ್ನಾಭಿಪ್ರಾಯ ಹೊಂದಿದ್ದರೂ ಎರಡೂ ದೇಶ ಗಳು ಒಪ್ಪಂದಕ್ಕೆ ಸಮ್ಮತಿ ಸೂಚಿಸಿವೆ.

ಭಾರತದ ಜತೆಗೆ ರಕ್ಷಣಾ ಸಹಕಾರವನ್ನು ವಿಸ್ತರಿಸಲು ಉತ್ಸುಕತೆ ತೋರಿಸುವ ಜಾನ್ಸನ್, ‘ಭಾರತದಲ್ಲೇ ಯುದ್ಧವಿಮಾನಗಳನ್ನು ತಯಾರಿಸಲು ಸಂಪೂರ್ಣ ಸಹಕಾರ ನೀಡುತ್ತೇವೆ’ ಎಂದು ಹೇಳಿದ್ದಾರೆ. ಜತೆಗೆ, ‘ಸೈಬರ್ ಭದ್ರತೆ, ಯುದ್ಧನೌಕೆಗಳ ಎಂಜಿನ್ ಅಭಿವೃದ್ಧಿ, ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್‌ ಪ್ರದೇಶದಲ್ಲಿ ಮುಕ್ತ ಮತ್ತು ಸ್ವತಂತ್ರ ಸಮುದ್ರಯಾನವನ್ನು ಕಾಯ್ದುಕೊಳ್ಳುವಲ್ಲಿ ನೆರವು ನೀಡುತ್ತೇವೆ’ ಎಂದೂ ಅವರು ಹೇಳಿದ್ದಾರೆ.

ಸೇನಾ ಸಾಮಗ್ರಿಗಳು ಮತ್ತು ಯುದ್ಧೋಪಕರಣಗಳಿಗಾಗಿ ರಷ್ಯಾ ಮೇಲೆ ಭಾರತದ ಅವಲಂಬನೆಯನ್ನು ತಗ್ಗಿಸಲು ಬ್ರಿಟನ್‌ ಈ ಸಹಕಾರವನ್ನು ಮುಂದಿಟ್ಟಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಭಾರತಕ್ಕೆ ರಕ್ಷಣಾ ಸಾಮಗ್ರಿಗಳನ್ನು ಅತ್ಯಂತ ತ್ವರಿತವಾಗಿ ಮಾರಾಟ ಮಾಡಲು ಅನುಕೂಲ ಮಾಡಿಕೊಡುವ ‘ಮುಕ್ತ ಸಾಮಾನ್ಯ ರಫ್ತು ಪರವಾನಗಿ’ (ಒಜಿಇಎಲ್‌) ಅನ್ನು ನೀಡುವುದಾಗಿ ಜಾನ್ಸನ್ ಅವರು ಘೋಷಿಸಿದ್ದಾರೆ. ಈ ಪರವಾನಗಿ ದೊರೆತರೆ, ಬ್ರಿಟನ್‌ನಿಂದ ಹಲವು ಹಂತದ ರಾಜತಾಂತ್ರಿಕ ಪ್ರಕ್ರಿಯೆಗಳನ್ನು ಕೈಬಿಟ್ಟು, ರಕ್ಷಣಾ ಸಾಮಗ್ರಿಗಳನ್ನು ನೇರವಾಗಿ ತರಿಸಿಕೊಳ್ಳುವುದು ಸಾಧ್ಯವಾಗುತ್ತದೆ.

ADVERTISEMENT

ತೆರಿಗೆ ಮುಕ್ತ ವ್ಯಾಪಾರ: ‘ಭಾರತದೊಂದಿಗೆ ತೆರಿಗೆ ಮುಕ್ತ ವ್ಯಾಪಾರಕ್ಕೆ ಎದುರು ನೋಡುತ್ತಿದ್ದೇವೆ. ಬ್ರಿಟನ್‌ನಿಂದ ರಫ್ತಾಗುವ ಹಲವು ವಸ್ತುಗಳಿಗೆ ಭಾರತವು ಸುಂಕ ವಿನಾಯಿತಿ ನೀಡಿದೆ. ಭಾರತದಿಂದ ರಫ್ತಾಗುವ ಸರಕುಗಳಿಗೆ ಬ್ರಿಟನ್‌ನಲ್ಲಿ ಸುಂಕ ವಿನಾಯಿತಿ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ದೀಪಾವಳಿ ವೇಳೆಗೆ ಇದು ಅಂತಿಮವಾಗುವುದನ್ನು ಎದುರು ನೋಡುತ್ತಿದ್ದೇವೆ’ ಎಂದು ಬೋರಿಸ್ ಜಾನ್ಸನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.