ADVERTISEMENT

ಮೊದಲ ಹಂತದ ‘ಮಲಬಾರ್‌ ಕವಾಯತು’ ಆರಂಭ

ಭಾರತ, ಅಮೆರಿಕ, ಜಪಾನ್‌ ಮತ್ತು ಆಸ್ಟ್ರೇಲಿಯ ನೌಕಾಪಡೆಯ ಜಂಟಿ ಸಮರಾಭ್ಯಾಸ

ರಾಯಿಟರ್ಸ್
Published 3 ನವೆಂಬರ್ 2020, 14:38 IST
Last Updated 3 ನವೆಂಬರ್ 2020, 14:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ಹಿಂದೂ ಮಹಾಸಾಗರ–ಪೆಸಿಫಿಕ್‌ ಪ್ರದೇಶದಲ್ಲಿ ಹೆಚ್ಚುತ್ತಿರುವ ಚೀನಾದ ಸೇನಾ ಮತ್ತು ಆರ್ಥಿಕ ಪ್ರಾಬಲ್ಯಕ್ಕೆ ಕಡಿವಾಣ ಹಾಕುವುದರ ಭಾಗವಾಗಿ, ಬೃಹತ್‌ ಜಂಟಿ ನೌಕಾಪಡೆ ಕವಾಯತನ್ನು ಭಾರತ, ಅಮೆರಿಕ, ಜಪಾನ್‌ ಹಾಗೂ ಆಸ್ಟ್ರೇಲಿಯಾ ಮಂಗಳವಾರ ಆರಂಭಿಸಿವೆ.

ಭಾರತವು ಲಡಾಖ್‌ನಲ್ಲಿ ಚೀನಾ ಜತೆ ಗಡಿ ಸಂಘರ್ಷ ಎದುರಿಸುತ್ತಿರುವ ಸಂದರ್ಭದಲ್ಲೇ ಬಂಗಾಳಕೊಲ್ಲಿಯ ವಿಶಾಖಪಟ್ಟಣ ಕರಾವಳಿ ಪ್ರದೇಶದಲ್ಲಿ ಈ ಸಮರಾಭ್ಯಾಸ ಆರಂಭಗೊಂಡಿದೆ. 1992ರಲ್ಲಿ ಅಮೆರಿಕ ಹಾಗೂ ಭಾರತದ ದ್ವಿಪಕ್ಷೀಯ ಸೇನಾ ಸಮರಾಭ್ಯಾಸದ ಭಾಗವಾಗಿ ‘ಮಲಬಾರ್‌’ ಕವಾಯತು ಆರಂಭಿಸಲಾಗಿತ್ತು. 2015ರಲ್ಲಿ ಜಪಾನ್‌ ಈ ಸಮರಾಭ್ಯಾಸಕ್ಕೆ ಸೇರ್ಪಡೆಗೊಂಡಿತು. ‘ಮಲಬಾರ್‌’ ಕವಾಯತಿನಲ್ಲಿ ಅಮೆರಿಕ ಹಾಗೂ ಜಪಾನ್‌ ಜೊತೆಗೆ ಈ ಬಾರಿ ಆಸ್ಟ್ರೇಲಿಯವನ್ನೂ ಸೇರ್ಪಡೆಗೊಳಿಸಲಾಗಿದೆ. ಈ ಮುಖಾಂತರ ‘ಕ್ವಾಡ್‌’ ಕೂಟದ ಎಲ್ಲ ರಾಷ್ಟ್ರಗಳು ಈ ಸಮರಾಭ್ಯಾಸಲ್ಲಿ ಭಾಗಿಯಾಗಿವೆ.

ಭಾರತೀಯ ನೌಕಾಪಡೆಯ ಐದು ಯುದ್ಧನೌಕೆಗಳು, ಒಂದು ಜಲಾಂತರ್ಗಾಮಿ ನೌಕೆ, ಅಮೆರಿಕದ ನೌಕಾಪಡೆಯ ಜಾನ್‌ ಎಸ್‌.ಮೆಕ್‌ಕೈನ್‌ ಕ್ಷಿಪಣಿ ಧ್ವಂಸಕ ನೌಕೆ, ಆಸ್ಟ್ರೇಲಿಯಾದ ‘ಬಲ್ಲಾರ್‍ಯಾಟ್‌ ಫ್ರಿಗೆಟ್‌ ಹಾಗೂ ಜಪಾನ್‌ನ ಯುದ್ಧನೌಕೆಯೊಂದು ಕವಾಯತಿನಲ್ಲಿ ಭಾಗಿಯಾಗಿದೆ ಎಂದು ರಕ್ಷಣಾ ಸಚಿವಾಲಯವು ಮಾಹಿತಿ ನೀಡಿದೆ.

ADVERTISEMENT

ಕೋವಿಡ್‌–19 ನಿರ್ಬಂಧದ ಕಾರಣ ಮೊದಲ ಹಂತದ ಕವಾಯತಿನ ಸಂದರ್ಭದಲ್ಲಿ(ನ.6ರವರೆಗೆ) ನಾಲ್ಕು ರಾಷ್ಟ್ರಗಳ ನೌಕಾಪಡೆಯ ಸಿಬ್ಬಂದಿಯು ಪರಸ್ಪರ ಸಂಪರ್ಕಿಸುವುದಿಲ್ಲ. ತಿಂಗಳಾಂತ್ಯಕ್ಕೆ ಅಮೆರಿಕ ಹಾಗೂ ಭಾರತವು ಯುದ್ಧವಿಮಾನಗಳನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ಯುದ್ಧನೌಕೆಗಳನ್ನು ಕವಾಯತಿಗೆ ಸೇರ್ಪಡೆಗೊಳಿಸಲಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಎರಡನೇ ಹಂತದ ಕವಾಯತು ನ.17ರಿಂದ 20ರವರೆಗೆ ಅರಬ್ಬೀ ಸಮುದ್ರದಲ್ಲಿ ನಡೆಯಲಿದೆ.

ಪ್ರಾದೇಶಿಕ ಶಾಂತಿಗೆ ಅಡ್ಡಿಯಾಗದಿರಲಿ (ಬೀಜಿಂಗ್‌ ವರದಿ): ಮಲಬಾರ್‌ ಕವಾಯತನ್ನು ಚೀನಾ ಪರೋಕ್ಷವಾಗಿ ಟೀಕಿಸಿದೆ. ಕವಾಯತು ಆರಂಭದ ಕುರಿತು ಪ್ರತಿಕ್ರಿಯೆ ನೀಡಿರುವವಿದೇಶಾಂಗ ಇಲಾಖೆ ವಕ್ತಾರ ವಾಂಗ್‌ ವೆನ್‌ಬಿನ್‌, ‘ಈ ಸಮರಾಭ್ಯಾಸವು ಪ್ರಾದೇಶಿಕ ಶಾಂತಿ ಹಾಗೂ ಸ್ಥಿರತೆಗೆ ನೆರವಾಗಲಿದೆ, ಬದಲಾಗಿ ತದ್ವಿರುದ್ಧವಾಗಲಾರದು ಎನ್ನುವ ಭರವಸೆ ಇದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.