ADVERTISEMENT

ಹೊಸ ವರುಷದಂದು ಭಾರತದಲ್ಲಿ 67,385 ಮಕ್ಕಳ ಜನನ!

ಏಜೆನ್ಸೀಸ್
Published 2 ಜನವರಿ 2020, 7:31 IST
Last Updated 2 ಜನವರಿ 2020, 7:31 IST
   

ದೆಹಲಿ: 2020 ಜನವರಿ 1ರಂದು ಭಾರತದಲ್ಲಿ ಸರಿಸುಮಾರು 67,385 ಮಕ್ಕಳು ಜನಿಸಿದ್ದಾರೆ. ವಿಶ್ವದ ಇತರ ದೇಶಗಳ ಪೈಕಿ ಭಾರತದಲ್ಲಿ ಅತೀ ಹೆಚ್ಚು ಮಕ್ಕಳು ಈ ದಿನ ಹುಟ್ಟಿದ್ದಾರೆ ಎಂದು ಯುನಿಸೆಫ್ ಹೇಳಿದೆ.

ಹೊಸ ವರುಷದಂದು ಜಗತ್ತಿನಾದ್ಯಂತ ಅಂದಾಜು392,078 ಮಕ್ಕಳು ಜನಿಸಿದ್ದಾರೆ. ಇದರಲ್ಲಿ ಶೇ.17ರಷ್ಚು ಮಕ್ಕಳು ಭಾರತದಲ್ಲಿ ಹುಟ್ಟಿದವರಾಗಿದ್ದಾರೆ.

ಜನವರಿ 1ರಂದು ಚೀನಾದಲ್ಲಿ 46,299 , ನೈಜಿರಿಯಾದಲ್ಲಿ 26,039, ಪಾಕಿಸ್ತಾನದಲ್ಲಿ 16,787, ಇಂಡೋನೇಷ್ಯಾದಲ್ಲಿ 13,020 ಮತ್ತು ಅಮೆರಿಕದಲ್ಲಿ10,452 ಮಕ್ಕಳು ಜನಿಸಿದ್ದಾರೆ.

ADVERTISEMENT

ಸಾಮಾನ್ಯವಾಗಿ ದಕ್ಷಿಣ ಶಾಂತಸಾಗರದಲ್ಲಿರುವ ದ್ವೀಪರಾಷ್ಟ್ರ ಫಿಜಿಯಲ್ಲಿ 2020ರ ಮೊದಲ ಮಗು ಹುಟ್ಟಿದರೆ, ಅಮೆರಿಕದಲ್ಲಿ ಕೊನೆಯ ಮಗು ಜನನವಾಗುತ್ತದೆ.

‘ರಾಷ್ಟ್ರರಾಜಧಾನಿಯಲ್ಲಿಯೂ ಅನೇಕ ಮಕ್ಕಳು ಜನಸಿದ್ದಾರೆ. ಹೊಸ ವರ್ಷದ ದಿನದಂದು ಮಗು ಹುಟ್ಟಬೇಕೆಂದು ಬಹಳಷ್ಟು ಮಂದಿ ಜ.1ರಂದು ಸಿಸೇರಿಯನ್‌ ಮಾಡಿಸಿಕೊಳ್ಳುತ್ತಾರೆ. ಹೊಸ ವರ್ಷದ ಮೊದಲ ದಿನ ಮಗು ಜನಿಸಿದರೆ ಶುಭ ಎನ್ನುವುದು ಅನೇಕರ ನಂಬಿಕೆ’ ಎಂದು ವೈದ್ಯರು ತಿಳಿಸಿದರು.

ಆದರೆ, ಅದೇನು ಅಷ್ಟು ಶುಭವಲ್ಲ ಎನ್ನುತ್ತಿದೆ ಯುನಿಸೆಫ್‌ ವರದಿ. 2018ರಲ್ಲಿ ಜನವರಿ 1ರಂದು ಹುಟ್ಟಿದ ಮಕ್ಕಳಲ್ಲಿ 25 ಲಕ್ಷ ಮಕ್ಕಳು ಹುಟ್ಟಿದ ಒಂದು ತಿಂಗಳೊಳಗೆ ಮೃತಪಟ್ಟಿವೆ. ಅದರಲ್ಲಿ ಮೂರನೇ ಒಂದು ಮಗು ಹುಟ್ಟಿದ ದಿನವೇ ಸತ್ತಿದೆ ಎಂಬ ಮಾಹಿತಿಯನ್ನು ವರದಿ ಬಿಚ್ಚಿಟ್ಟಿದೆ.

ಪ್ರಸವದ ಸಮಯದಲ್ಲಿ ಉಂಟಾದ ಸಂಕೀರ್ಣತೆಯಿಂದ, ಅವಧಿ ಪೂರ್ವ ಜನನ ಮತ್ತು ಸೋಂಕಿನಿಂದಲೇ ಸಾಕಷ್ಟು ಮಕ್ಕಳು ಮೃತಪಟ್ಟಿವೆ. ಪ್ರತಿ ವರ್ಷವೂ 25 ಲಕ್ಷ ಮಕ್ಕಳು ಹುಟ್ಟುವಾಗಲೇ ಮೃತಪಟ್ಟಿರುತ್ತವೆ ಎಂದು ಯುನಿಸೆಫ್‌ ತಿಳಿಸಿದೆ.

ಮೂರು ದಶಕಗಳಿಂದ ಮಕ್ಕಳ ಸಾವಿನ ಪ್ರಮಾಣದಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಭಾರತದಲ್ಲಿಯೂ ಕಳೆದ ಕೆಲವು ವರ್ಷಗಳಿಂದ ನವಜಾತ ಶಿಶುಗಳ ಮರಣಪ್ರಮಾಣ ಗಣನೀಯ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.